ಶಿರಸಿ: ಹಲ್ಲಿ ಎಂದರೆ ಸಾಮಾನ್ಯವಾಗಿ ಗೋಡೆ, ಮರದ ಮೇಲೆ ಓಡಾಡುವ ಪುಟ್ಟ ಜೀವಿ ಎಂಬುದಷ್ಟೇ ನಮ್ಮ ಕಲ್ಪನೆ. ಆದರೆ ಈ ಓತಿ ಮಾತ್ರ ಹಾಗಲ್ಲ. ಶಿರಸಿ ತಾಲೂಕಿನ ಬನವಾಸಿ ರಸ್ತೆಯ ಉಂಚಳ್ಳಿಯಲ್ಲಿ ಇಂತಹ ಅಪರೂಪದ ಜೀವಿಯೊಂದು ಕಾಣಿಸಿಕೊಂಡಿದ್ದು, ಪ್ರಕೃತಿ ಪ್ರಿಯರ ಗಮನ ಸೆಳೆದಿದೆ.
ಮರದ ತುದಿಯಿಂದ ಜಿಗಿದು, ತನ್ನ ಎರಡೂ ಬದಿಯ ಚರ್ಮದ ಪೊರೆಯನ್ನು ರೆಕ್ಕೆಯಂತೆ ಚಾಚಿಕೊಂಡು ಗಾಳಿಯಲ್ಲಿ ತೇಲಿ ಮತ್ತೊಂದು ಮರವನ್ನು ಸೇರುತ್ತದೆ. ಅದಕ್ಕೆ ಹೆಸರು ‘ಹಾರುವ ಓತಿ’! ಉಂಚಳ್ಳಿಯ ಕೃಷ್ಣ ಭಟ್ ಅವರ ಮನೆಯಲ್ಲಿ ಕಾಣಿಸಿಕೊಂಡಿರುವ ಈ ಜೀವಿಯನ್ನು Southern Flying Lizard ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು Draco dussumieri.
ಇದು ನಿಜವಾಗಿ ಪಕ್ಷಿಯಂತೆ ಹಾರುವುದಿಲ್ಲ. ಮರದಿಂದ ಮರಕ್ಕೆ ಜಿಗಿದಾಗ ಉದ್ದವಾಗಿ ಬೆಳೆದ ಪಕ್ಕೆಲುಬುಗಳ ನಡುವೆ ಇರುವ ಚರ್ಮದ ಪೊರೆಯನ್ನು ಅಗಲವಾಗಿ ಚಾಚಿಕೊಂಡು ಗಾಳಿಯಲ್ಲಿ ತೇಲುತ್ತಾ ಸಾಗುತ್ತದೆ. ಸರಳವಾಗಿ ಹೇಳುವುದಾದರೆ, ಜಿಗಿದ ನಂತರ ಕೆಳಗೆ ಬೀಳುವ ಬದಲು, ದೇಹದ ‘ರೆಕ್ಕೆಯಂತಿರುವ’ ಚರ್ಮದ ಸಹಾಯದಿಂದ ಸ್ವಲ್ಪ ದೂರ ಗಾಳಿಯಲ್ಲಿ ತೇಲಿ ಸಾಗುತ್ತದೆ.
ಈ ಜೀವಿಯ ಹೆಸರು ಕೇಳಿದ ತಕ್ಷಣ ಕನ್ನಡದ ಓದುಗರಿಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿ ನೆನಪಾಗುವುದು ಸಹಜ. ಅಪರೂಪದ ಹಾರುವ ಓತಿಯ ಹುಡುಕಾಟವೇ ಆ ಕಾದಂಬರಿಯ ಪ್ರಮುಖ ಹಂದರ. ವಿಜ್ಞಾನಿ ಕರ್ವಾಲೋ, ಮಂದಣ್ಣ ಮತ್ತು ಇತರರು ಪಶ್ಚಿಮಘಟ್ಟದ ಕಾಡಿನಲ್ಲಿ ಈ ವಿಚಿತ್ರ ಜೀವಿಯ ಬೆನ್ನು ಹತ್ತುವ ಕಥೆಯನ್ನು ತೇಜಸ್ವಿ ಅತ್ಯಂತ ಕುತೂಹಲಕರವಾಗಿ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ ‘ಹಾರುವ ಓತಿ’ ಎಂಬ ಹೆಸರು ಕನ್ನಡ ಸಾಹಿತ್ಯದಲ್ಲಿಯೂ ವಿಶಿಷ್ಟವಾಗಿ ಪರಿಚಿತವಾಗಿದೆ.
ಆದರೆ ಕರ್ವಾಲೋ ಕಾದಂಬರಿಯಲ್ಲಿರುವುದು ಕೇವಲ ಕಲ್ಪನೆಯ ಜೀವಿಯಲ್ಲ. ಪಶ್ಚಿಮಘಟ್ಟಗಳಲ್ಲಿ ನಿಜವಾಗಿಯೂ ಕಂಡುಬರುವ ಅಪರೂಪದ ಜೀವಿಯಿದು. ಕರ್ನಾಟಕ, ಕೇರಳ, ಗೋವಾ ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ಇದರ ವಾಸಸ್ಥಳವಿದೆ. ಮರದ ತೊಗಟೆಯನ್ನು ಹೋಲುವ ಬೂದು-ಕಂದು ಬಣ್ಣದ ದೇಹ ಹೊಂದಿರುವುದರಿಂದ ಮರದ ಮೇಲೆ ಕುಳಿತಾಗ ಸುಲಭವಾಗಿ ಕಣ್ಣಿಗೆ ಬೀಳುವುದಿಲ್ಲ. ಆದರೆ ತನ್ನ ‘ರೆಕ್ಕೆ’ಯಂತಹ ಪೊರೆಯನ್ನು ಚಾಚಿದಾಗ ಅದರ ಮೇಲಿರುವ ಕೆಂಪು, ಕಪ್ಪು ಮತ್ತು ಹಳದಿ ಬಣ್ಣದ ಚಿತ್ತಾರಗಳು ಸ್ಪಷ್ಟವಾಗಿ ಕಾಣಿಸುತ್ತವೆ.
ಇದರ ಇನ್ನೊಂದು ವಿಶೇಷತೆ ಗಂಡು ಓತಿಯ ಗದ್ದದ ಕೆಳಗೆ ಕಾಣುವ ಹಳದಿ ಬಣ್ಣದ ಡ್ಯೂಲ್ಯಾಪ್ ಎಂಬ ಚರ್ಮದ ಚೀಲ. ಹೆಣ್ಣನ್ನು ಆಕರ್ಷಿಸಲು ಮತ್ತು ತನ್ನ ಪ್ರದೇಶವನ್ನು ಗುರುತಿಸಲು ಇದನ್ನು ಬಳಸುತ್ತದೆ. ಈ ಓತಿಯ ಜೀವನ ಬಹುತೇಕ ಮರದ ಮೇಲೆಯೇ. ಇರುವೆಗಳು ಮತ್ತು ಸಣ್ಣ ಕೀಟಗಳು ಇದರ ಪ್ರಮುಖ ಆಹಾರ.
ಮನುಷ್ಯರಿಗೆ ಯಾವುದೇ ಹಾನಿ ಮಾಡದ, ವಿಷಕಾರಿಯಲ್ಲದ ಈ ಜೀವಿ ತುಂಬಾ ನಾಚಿಕೆ ಸ್ವಭಾವದ್ದು. ಹೆಣ್ಣು ಓತಿ ನೆಲದಲ್ಲಿ ಸಣ್ಣ ಗುಂಡಿ ತೋಡಿ ಮೊಟ್ಟೆಗಳನ್ನು ಇಡುತ್ತದೆ. ಅರಣ್ಯ ನಾಶ ಮತ್ತು ಆವಾಸಸ್ಥಾನದ ಬದಲಾವಣೆ ಇಂತಹ ಜೀವಿಗಳಿಗೆ ಅಪಾಯ ತಂದೊಡ್ಡುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಅಪರೂಪದ ಜೀವಿಗಳು ಮನೆ ಅಥವಾ ತೋಟದ ಬಳಿ ಕಂಡುಬಂದರೆ ಅವುಗಳನ್ನು ಹೊಡೆಯದೆ, ಹಿಡಿಯಲು ಪ್ರಯತ್ನಿಸದೆ, ಅರಣ್ಯ ಇಲಾಖೆ ಅಥವಾ ಸ್ಥಳೀಯ ವನ್ಯಜೀವಿ ರಕ್ಷಕರಿಗೆ ಮಾಹಿತಿ ನೀಡುವುದು ಸೂಕ್ತ.
ತೇಜಸ್ವಿಯವರ ಕರ್ವಾಲೋ ಓದಿದವರಿಗೆ ಬಹುಶಃ ಪುಸ್ತಕದ ಪುಟಗಳಿಂದ ಹೊರಬಂದ ಜೀವಿಯಂತೆ ಕಾಣಬಹುದು. ಇತರರಿಗೆ ಪ್ರಕೃತಿಯ ಮತ್ತೊಂದು ಅಚ್ಚರಿ. ಉಂಚಳ್ಳಿಯಲ್ಲಿ ಕಾಣಿಸಿಕೊಂಡ ಈ ಪುಟ್ಟ ‘ಹಾರುವ ಓತಿ’ ಮಾತ್ರ ʻಕರ್ವಾಲೋ ಹುಡುಕಿದ್ದು ಇದನ್ನೇನಾ?!ʼ ಎಂಬ ಹಳೆಯ ಕುತೂಹಲವನ್ನು ಮತ್ತೆ ಕೆರಳಿಸಿದೆ.