ಯಲ್ಲಾಪುರ: ಮೂರು ದಶಕಗಳಿಂದ ಯುವಕರ ಒಗ್ಗಟ್ಟಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಯಲ್ಲಾಪುರದ ಉದ್ಯಮ ನಗರದ ಗಣೇಶೋತ್ಸವ ಮಂಟಪಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಗಣಪತಿ ದರ್ಶನ ಪಡೆದರು.ಇದೇ ವೇಳೆ ಸ್ಥಳೀಯರೊಂದಿಗೆ ಆ ಭಾಗದ ಸಮಸ್ಯೆಗಳ ಕುರಿತು ಚರ್ಚಿಸಿ, ಮೂಲಭೂತ ಸೌಕರ್ಯಗಳ ಸುಧಾರಣೆ ಹಾಗೂ ಶಾಶ್ವತ ಪರಿಹಾರದ ಬಗ್ಗೆ ಭರವಸೆ ನೀಡಿದರು.
ಉದ್ಯಮ ನಗರದಲ್ಲಿ ಈ ಬಾರಿ 30ನೇ ವರ್ಷದ ಗಣೇಶೋತ್ಸವ ನಡೆಯುತ್ತಿದ್ದು, ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಉತ್ಸವವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದಾರೆ.ಒಂಬತ್ತು ದಿನಗಳ ಕಾಲ ನಡೆಯುತ್ತಿರುವ ಉತ್ಸವದಲ್ಲಿ ಪೂಜೆ, ಮಹಾಪೂಜೆ, ಗಣಹೋಮ, ರಸಮಂಜರಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದ್ದು, ಸುತ್ತಲಿನ ಪ್ರದೇಶದಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಉತ್ಸವ ಸಮಿತಿಯ ಸದಸ್ಯರೇ ಗುಹೆ ಆಕಾರದ ಮಂಟಪವನ್ನು ನಿರ್ಮಿಸಿದ್ದು, ಇದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಪರಿಸರ ಸ್ನೇಹಿ ಆಚರಣೆಗೆ ಒತ್ತು ನೀಡಿರುವ ಸಮಿತಿ ಈ ಬಾರಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದೆ. ದೇವಿ ದೇವಸ್ಥಾನದ ಬಳಿಯ ಪ್ರಸಾದ ಗುನಗಾ ಅವರು ಮೂರ್ತಿಯನ್ನು ರಚಿಸಿಕೊಟ್ಟಿದ್ದಾರೆ.30ನೇ ವರ್ಷದ ಗಣೇಶೋತ್ಸವಕ್ಕೆ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಪಟಗಾರ ಅವರು ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಆಹ್ವಾನಿಸಿದ್ದರು. ಸಮಿತಿಯ ಆಹ್ವಾನದ ಮೇರೆಗೆ ಮಂಟಪಕ್ಕೆ ಆಗಮಿಸಿದ ಶಾಸಕರು ಗಣಪತಿ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಪ್ರವೀಣ್ ರಾಯ್ಕರ್, ಸಾರ್ಥಕ್ ಅಸುಕರ್, ದೇವೇಂದ್ರ ದೇವಡಿಗ, ದರ್ಶನ್ ಪಟಣಕರ್, ಗಣೇಶ್ ಪಟಣಕರ್, ಸಾಗರ್ ದೇಶಭಂಡಾರಿ, ಮದನ್ ಶೆಟ್ಟಿ, ಮೋಹನ್ ದೇವಾಡಿಗ, ಸುದೀಪ್ ಕಬ್ಬರ್ಗಿ, ಅಭಿಷೇಕ ದೇವಾಡಿಗ, ವಿನಯ ಗುನಗಿ, ಸಂದೀಪ ಬಾಂದೇಕರ್, ಪ್ರಶಾಂತ ನಾಯಕ ಸೇರಿದಂತೆ ಹಲವರು ಶಾಸಕರನ್ನು ಸನ್ಮಾನಿಸಿದರು.
ನಂತರ ಉದ್ಯಮ ನಗರದಲ್ಲಿ ಗಣೇಶೋತ್ಸವ ನಡೆಸಲು ಶಾಶ್ವತ ಕಟ್ಟಡದ ಅಗತ್ಯವಿರುವ ಬಗ್ಗೆ ಸಮಿತಿ ಸದಸ್ಯರು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಶಿವರಾಮ ಹೆಬ್ಬಾರ್ ಅವರು ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಒಂದು ವಾರದೊಳಗೆ ಲಿಖಿತ ಮನವಿ ಸಲ್ಲಿಸುವಂತೆ ಸೂಚಿಸಿದರು.
ಇದೇ ವೇಳೆ ಉದ್ಯಮ ನಗರದ ಇನ್ನಿತರ ಮೂಲಭೂತ ಸಮಸ್ಯೆಗಳ ಬಗ್ಗೆಯೂ ಸ್ಥಳೀಯರೊಂದಿಗೆ ಶಾಸಕರು ಚರ್ಚಿಸಿದರು. ಪ್ರದೇಶದ ಅಗತ್ಯ ಮೂಲಸೌಕರ್ಯಗಳಿಗೆ ಒತ್ತು ನೀಡುವುದಾಗಿ ಅವರು ಭರವಸೆ ನೀಡಿದರು.ಉದ್ಯಮ ನಗರದ ಗಣೇಶ ಮೂರ್ತಿಯ ವಿಸರ್ಜನೆ ನಾಳೆ (ಸೆ.22ರಂದು) ನಡೆಯಲಿದೆ.


