ಡಿಜೆ ಸದ್ದಿನ ನಡುವೆ ಮರೆಯಾಗದ ಕಲೆ; ಟ್ರ್ಯಾಕ್ಟರ್ ಮೇಲೆ ಮಹಾಭಾರತ, ಕೋಣದ ಮೇಲೆ ಯಮ!
ಬನವಾಸಿ: ಗಣೇಶ ವಿಸರ್ಜನಾ ಮೆರವಣಿಗೆ ಎಂದರೆ ಡಿಜೆ, ಧ್ವನಿವರ್ಧಕಗಳ ಆರ್ಭಟ, ಕುಣಿತ ಎಂಬ ಚಿತ್ರಣವೇ ಸಾಮಾನ್ಯ. ಆದರೆ ಬನವಾಸಿಯಿಂದ ಕೇವಲ ಐದಾರು ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮರಗುಂಡಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಎಂದರೆ ಅದೊಂದು ಸಾಂಸ್ಕೃತಿಕ ಹಬ್ಬ. ಇಲ್ಲಿ ಡಿಜೆ ಸದ್ದಿಗಿಂತ ಡೊಳ್ಳು-ನಗಾರಿಯ ನಾದ, ಆಧುನಿಕತೆಯ ಪ್ರದರ್ಶನಕ್ಕಿಂತ ಜನಪದ ಕಲೆಯ ಸೊಗಡು, ಕೇವಲ ವಿಸರ್ಜನೆಗಿಂತ ಕಲೆಯನ್ನು ಉಳಿಸುವ ಕಾಳಜಿ ಗಮನ ಸೆಳೆಯುತ್ತದೆ.
ಸುಮಾರು 150ರಿಂದ 160 ಮನೆಗಳಿರುವ ಮರಗುಂಡಿ ಇಂದಿಗೂ ಮೊಬೈಲ್ ನೆಟ್‌ವರ್ಕ್ ಸಂಪರ್ಕದಿಂದ ದೂರವಿರುವ ಗ್ರಾಮ. ಆದರೆ ಕಲೆಯ ವಿಚಾರದಲ್ಲಿ ಮಾತ್ರ ಈ ಪುಟ್ಟ ಊರು ಪಕ್ಕಾ ‘ಕನೆಕ್ಟೆಡ್’!
ನಶಿಸಿ ಹೋಗುತ್ತಿರುವ ಜನಪದ ಕಲಾ ಪ್ರಕಾರಗಳು, ಪೌರಾಣಿಕ ಪ್ರಸಂಗಗಳು, ದೊಡ್ಡಾಟ, ಭಜನೆ, ಸಾಮಾಜಿಕ ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇಲ್ಲಿನ ಯುವಕರು ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕೈಜೋಡಿಸುತ್ತಿದ್ದಾರೆ. ಕಲೆ ಉಳಿಯಬೇಕು ಎಂಬ ಆಶಯವನ್ನು ಕೇವಲ ಮಾತಿನಲ್ಲಿ ಹೇಳದೆ, ಅದನ್ನು ಆಚರಣೆಯ ಭಾಗವಾಗಿಸಿಕೊಂಡಿದ್ದಾರೆ.
ಮರಗುಂಡಿಯ ಶ್ರೀ ಗಜಾನನೋತ್ಸವ ಸಮಿತಿ ಕಳೆದ 28 ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದೆ. ಏಳು ದಿನಗಳ ಕಾಲ ಭವ್ಯ ರಂಗಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ, ಪ್ರತಿದಿನವೂ ಸುಮಾರು 300 ಪ್ರೇಕ್ಷಕರು ಕುಳಿತು ವೀಕ್ಷಿಸುವಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹೀಗಾಗಿ ಗಣೇಶೋತ್ಸವ ಇಲ್ಲಿ ಧಾರ್ಮಿಕ ಆಚರಣೆಯ ಜತೆಗೆ ಗ್ರಾಮೀಣ ಕಲಾವಿದರಿಗೆ ವೇದಿಕೆಯಾಗಿಯೂ ರೂಪುಗೊಂಡಿದೆ.
ಇದರ ಮುಂದುವರಿದ ಭಾಗವೇ ವಿಸರ್ಜನಾ ಮೆರವಣಿಗೆ. ಕೇವಲ ಧ್ವನಿವರ್ಧಕ/ಡಿಜೆ ಹಾವಳಿಗೆ ಸೀಮಿತವಾಗದೆ, ಗ್ರಾಮೀಣ ಜನರ ಕಲೆ ಮತ್ತು ಸೃಜನಶೀಲತೆಗೆ ವೇದಿಕೆಯಾಗುವಂತೆ ವಿವಿಧ ಟ್ಯಾಬ್ಲೋಗಳನ್ನು ಸಿದ್ಧಪಡಿಸಿ, ಡೊಳ್ಳು, ನಗಾರಿ, ಓಲಗ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಊರಿನಲ್ಲಿ ಮೆರವಣಿಗೆ ನಡೆಸಲಾಗುತ್ತದೆ.
ಈ ಬಾರಿ ಮೆರವಣಿಗೆಯಲ್ಲಿ ಮಹಾಭಾರತದ ‘ಅಕ್ಷಯಾಂಬರ’ ಪ್ರಸಂಗದ ಸ್ತಬ್ಧಚಿತ್ರ ವಿಶೇಷ ಗಮನ ಸೆಳೆಯಿತು. ಚಲಿಸುತ್ತಿದ್ದ ಟ್ರ್ಯಾಕ್ಟರ್‌ನಲ್ಲಿ ಪಾಂಡವರು ಮತ್ತು ಕೌರವರನ್ನು ಎದುರು-ಎದುರು ನಿಲ್ಲಿಸಿ, ಅವರಿಂದ ಸ್ವಲ್ಪ ದೂರದಲ್ಲಿ ಶ್ರೀಕೃಷ್ಣ ದ್ರೌಪತಿಗೆ ಅಕ್ಷಯ ಸೀರೆಯನ್ನು ನೀಡುವ ದೃಶ್ಯವನ್ನು ಅತ್ಯಂತ ಕಲಾತ್ಮಕವಾಗಿ ರೂಪಿಸಲಾಗಿತ್ತು. ಚಲಿಸುವ ವಾಹನದ ಮೇಲೆಯೇ ಪೌರಾಣಿಕ ಪ್ರಸಂಗವೊಂದು ಜೀವಂತವಾಗುವಂತೆ ಮಾಡಿದ್ದು ನೋಡುಗರ ಕುತೂಹಲಕ್ಕೆ ಕಾರಣವಾಯಿತು.
ಇಷ್ಟಕ್ಕೇ ಮರಗುಂಡಿಯ ಕಲಾ ಪ್ರದರ್ಶನ ನಿಲ್ಲಲಿಲ್ಲ. ಜಾತ್ರೆಗಳಲ್ಲಿ ಕಂಡುಬರುವ ಬೈಕ್ ರೇಸ್‌ಗಳ ಮಾದರಿ, ದೇಹದ ಆರೋಗ್ಯದ ಮಹತ್ವ ಸಾರುವ ಉಚಿತ ವ್ಯಾಯಾಮಶಾಲೆಯ ಮಾದರಿ, ನೈಜ ಕೋಣದ ಮೇಲೆ ಕುಳಿತು ಬರುವ ಯಮನ ರೂಪ, ವಿವಿಧ ಪಕ್ಷಿ-ಪ್ರಾಣಿಗಳ ಮಾದರಿಗಳು, ಆಧುನಿಕ ಉಡುಗೆ-ತೊಡುಗೆಗಳ ಪ್ರದರ್ಶನ, ಅರ್ಧನಾರೀಶ್ವರ ಪ್ರಸಂಗ ಸೇರಿದಂತೆ ಹಲವು ಸಾಂಸ್ಕೃತಿಕ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಕಾಣಿಸಿಕೊಂಡವು. ಹೀಗೆ ಒಂದರ ಹಿಂದೆ ಮತ್ತೊಂದು ವೈವಿಧ್ಯಮಯ ಪ್ರದರ್ಶನಗಳೊಂದಿಗೆ ಗಣೇಶ ವಿಸರ್ಜನಾ ಮೆರವಣಿಗೆಯನ್ನೇ ಒಂದು ಸಾಂಸ್ಕೃತಿಕ ಉತ್ಸವವನ್ನಾಗಿ ಮರಗುಂಡಿ ಕಟ್ಟಿಕೊಟ್ಟಿತು.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಮರಗುಂಡಿಯ ಅನೇಕ ಯುವಕರೂ ಗಣೇಶ ವಿಸರ್ಜನೆಯ ದಿನ ಊರಿಗೆ ಮರಳಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇಂದಿನ ಸಿನಿಮಾ ಹಾಡುಗಳಿಗೆ ಯುವಕರು ನೃತ್ಯ ಮಾಡಿದ್ದು ಮೆರವಣಿಗೆಗೆ ಆಧುನಿಕ ಸ್ಪರ್ಶ ನೀಡಿತು. ಆದರೆ ಅದರ ನಡುವೆಯೂ ಊರಿನ ಹಿರಿಯ ಕಲಾವಿದರು, ಕಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಪಾಲ್ಗೊಂಡು ತಮ್ಮ ಸಾಂಪ್ರದಾಯಿಕ ಕಲಾ ಸೊಗಡನ್ನು ಉಳಿಸಿಕೊಂಡರು.
ಆಧುನಿಕತೆಯನ್ನು ದೂರವಿಡದೆ, ಅದನ್ನು ಬಳಸಿಕೊಂಡೇ ಸಂಸ್ಕೃತಿಗೆ ಧಕ್ಕೆಯಾಗದಂತೆ ಆಚರಣೆಯನ್ನು ರೂಪಿಸಿಕೊಳ್ಳುತ್ತಿರುವುದು ಮರಗುಂಡಿಯ ವಿಶೇಷತೆ. ಗಣೇಶೋತ್ಸವದ ವೇದಿಕೆಯನ್ನು ಬಳಸಿಕೊಂಡು ಹೊಸ ತಲೆಮಾರಿಗೆ ತಮ್ಮದೇ ನೆಲದ ಕಲೆಗಳನ್ನು ಪರಿಚಯಿಸುವ ಪ್ರಯತ್ನವೂ ಇಲ್ಲಿ ನಡೆಯುತ್ತಿದೆ.
ಮರಗುಂಡಿಯಲ್ಲಿ ದೊಡ್ಡಾಟ, ಸಣ್ಣಾಟದಂತಹ ಅಳಿವಿನಂಚಿನಲ್ಲಿರುವ ವಿಶಿಷ್ಟ ಜನಪದ ಕಲಾ ಪ್ರಕಾರಗಳೂ ಇವೆ. ಸೂಕ್ತ ಮಾರ್ಗದರ್ಶನ, ಕಲಾವಿದರಿಗೆ ಪ್ರೋತ್ಸಾಹ ಮತ್ತು ಸರ್ಕಾರದ ನೆರವಿನ ಹಸ್ತ ದೊರೆತರೆ ಇಂತಹ ಕಲೆಗಳನ್ನು ಇನ್ನಷ್ಟು ವರ್ಷಗಳ ಕಾಲ ಉಳಿಸಬಹುದು ಎಂಬುದು ಇಲ್ಲಿನ ಹಿರಿಯ ಕಲಾವಿದರ ಆಶಯ. ತಮ್ಮ ನೆಲದ ಕಲೆ, ಸಂಸ್ಕೃತಿ ಮತ್ತು ಪರಂಪರೆಗೆ ಹೊಸ ತಲೆಮಾರಿನವರು ನೀಡಿದ ಗೌರವದ ಪ್ರದರ್ಶನ ಇಡೀ ಮೆರವಣಿಗೆಯನ್ನು ಭಿನ್ನವಾಗಿಸಿತು.
ವಿಶೇಷ ವರದಿ: ಸುಧೀರ್ ನಾಯರ್, ಬನವಾಸಿ.


