Friday, October 23, 2026
HomeLocal Newsಚುನಾವಣೆಯಲ್ಲಿ ಮತದಾರರು, ನಂತರ ಅತಿಕ್ರಮಣದಾರರು!

ಚುನಾವಣೆಯಲ್ಲಿ ಮತದಾರರು, ನಂತರ ಅತಿಕ್ರಮಣದಾರರು!

ಮನೆ ನಂಬರ್ ರದ್ದು ಆದೇಶ ಹಿಂಪಡೆಯುವಂತೆ ಆಗ್ರಹ: ದೇವನಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ

ಶಿರಸಿ: ಚುನಾವಣಾ ಸಂದರ್ಭದಲ್ಲಿ ಮತದಾರರಂತೆ ಕಾಣುವ ಜನರು, ಚುನಾವಣೆ ಮುಗಿದ ಬಳಿಕ ಅತಿಕ್ರಮಣದಾರರಂತೆ ಕಾಣುತ್ತಾರೆ. ಕಾಂಗ್ರೆಸ್‌ಗೆ ಮತ ನೀಡಿದ ತಪ್ಪಿಗೆ ಸರ್ಕಾರ ನೀಡುವ ರೂ.2 ಸಾವಿರ ತೆಗೆದುಕೊಂಡು ರಸ್ತೆಯಲ್ಲಿ ನಿಲ್ಲಬೇಕೇ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಕಟುವಾಗಿ ಪ್ರಶ್ನಿಸಿದರು.

ತಾಲೂಕಿನ ದೇವನಳ್ಳಿಯಲ್ಲಿ ಅತಿಕ್ರಮಣ ಹಾಗೂ ಗಾಂವಠಾಣ ಜಾಗದಲ್ಲಿರುವ ಮನೆ–ನಿವೇಶನಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವ ರಾಜ್ಯ ಸರ್ಕಾರದ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಗೆಜೆಟ್ ಅಧಿಸೂಚನೆ ಹೊರಬಂದು ಒಂದು ವರ್ಷ ಕಳೆದರೂ ಈ ವಿಚಾರದಲ್ಲಿ ಸ್ಥಳೀಯ ಶಾಸಕರು ಏಕೆ ಮೌನ ವಹಿಸಿದ್ದಾರೆ? ಸರ್ಕಾರದ ಕ್ರಮಕ್ಕೆ ಅವರ ಸಹಮತವಿದೆಯೇ ಎಂದು ಪ್ರಶ್ನಿಸಿದ ಅನಂತಮೂರ್ತಿ ಹೆಗಡೆ, ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ ರೋಗ ಬಾಧೆಯಿಂದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರಿಗೆ ಪರಿಹಾರ ನೀಡುವ ಬದಲು ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತಂದು ಜನರ ಮನೆ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಈ ವಿಚಾರದಲ್ಲಿ ಸ್ಥಳೀಯ ಶಾಸಕರು ಏಕೆ ಮಾತನಾಡುತ್ತಿಲ್ಲ? ಜನರ ಹಕ್ಕು ಕಸಿಯುವಲ್ಲಿ ಅವರೂ ಪಾಲುದಾರರಾಗಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ವಸತಿ ರಹಿತರಿಗೆ ಸೂಕ್ತ ರೀತಿಯಲ್ಲಿ ಮನೆಗಳನ್ನು ಒದಗಿಸದ ಕಾಂಗ್ರೆಸ್ ಸರ್ಕಾರ ಇದೀಗ ಸಾವಿರಾರು ಮನೆಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸ್ತೂರಿರಂಗನ್ ವರದಿ ವಿಚಾರದಲ್ಲೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಸ್ತೂರಿರಂಗನ್ ವರದಿ ಕಾಂಗ್ರೆಸ್‌ನ ಪಾಪದ ಕೂಸು. ಅಂದಿನ ಕೇಂದ್ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವರದಿ ಜಾರಿಗೆ ಬಂದಿದೆ. ಇದೀಗ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.

ಹೋರಾಟದ ಸಂಚಾಲಕ ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ನವೀನ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಅರಣ್ಯ ಹಾಗೂ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಅನೇಕ ಕುಟುಂಬಗಳು ಪಂಚಾಯಿತಿಯಿಂದ ಮನೆ ನಂಬರ್ ಪಡೆದು, ತೆರಿಗೆ ಪಾವತಿಸಿ, ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಜೀವನ ಕಟ್ಟಿಕೊಂಡಿವೆ. ಇಂತಹ ಕುಟುಂಬಗಳ ದಾಖಲೆಗಳನ್ನು ಏಕಾಏಕಿ ರದ್ದುಪಡಿಸುವುದು ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಕ್ರಮಣ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಜನರು ವಾಸಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇವರು ಮತದಾರರಾಗುತ್ತಾರೆ. ನಂತರ ಅವರನ್ನು ಅತಿಕ್ರಮಣದಾರರು ಎಂದು ಪರಿಗಣಿಸಲಾಗುತ್ತದೆ. ಸರ್ಕಾರ ಈ ದ್ವಂದ್ವ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಮನೆ ನಂಬರ್ ಇಲ್ಲದಿದ್ದರೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳು ದೊರೆಯುವುದಿಲ್ಲ. ಮನೆ ನಂಬರ್ ಇಲ್ಲದಿದ್ದರೆ ನಾವು ಶಾಶ್ವತವಾಗಿ ಬೀದಿಯಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಮನೆ ನಂಬರ್ ಉಳಿಯುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ದೇವನಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಮರಾಠಿ ಮಾತನಾಡಿ, ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಮಾಡುವ ಬದಲು ಅರ್ಹರಿಗೆ ಹಕ್ಕುಪತ್ರ ನೀಡಿಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು. ಹಲವು ವರ್ಷಗಳಿಂದ ತೆರಿಗೆ ಪಾವತಿಸಿ ಪಂಚಾಯಿತಿ ದಾಖಲೆಗಳನ್ನು ಹೊಂದಿರುವ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಕ್ರಮ ಸರಿಯಲ್ಲ ಎಂದರು.

ಮಾಜಿ ಸದಸ್ಯ ನಾರಾಯಣ ಹೆಗಡೆ ಮಾತನಾಡಿ, ಸರ್ಕಾರದ ಆದೇಶ ಜಾರಿಯಾದರೆ ಅತಿಕ್ರಮಣ ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಲಿದೆ. ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ನಿರ್ಧಾರವನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸುದರ್ಶನ ದಿವಾಕರ, ಸುನೀಲ ಹೆಗಡೆ, ದಾಮೋದರ ಸಿದ್ದಿ, ರವಿ ಗಾಂವ್ಕರ್, ಸುನೀಲ್ ಭಟ್, ನಿರ್ಮಲಾ ಶೆಟ್ಟಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share