Friday, October 23, 2026
HomeLocal News'ಉತ್ತರ ಕನ್ನಡವನ್ನು ಗೋವಾಕ್ಕೆ ಸೇರಿಸುವ ಮಾತು ಹಿಂಪಡೆಯಿರಿ’: ಮಂಕಾಳ ವೈದ್ಯರಿಗೆ ಮಾಸ್ತಪ್ಪ ನಾಯ್ಕ ಆಗ್ರಹ

‘ಉತ್ತರ ಕನ್ನಡವನ್ನು ಗೋವಾಕ್ಕೆ ಸೇರಿಸುವ ಮಾತು ಹಿಂಪಡೆಯಿರಿ’: ಮಂಕಾಳ ವೈದ್ಯರಿಗೆ ಮಾಸ್ತಪ್ಪ ನಾಯ್ಕ ಆಗ್ರಹ

ಕಾರವಾರ: ಉತ್ತರ ಕನ್ನಡ ಜಿಲ್ಲೆಯನ್ನು ಗೋವಾ ರಾಜ್ಯಕ್ಕೆ ಸೇರಿಸುವ ಹೋಲಿಕೆಯ ಮಾತುಗಳನ್ನು ಉಪಸಭಾಪತಿ ಮಂಕಾಳ ವೈದ್ಯರು ಕೂಡಲೇ ಹಿಂಪಡೆದು, ಜಿಲ್ಲೆಯ ಜನರ ಮುಂದೆ ಕ್ಷಮೆ ಕೇಳಬೇಕು. ಉತ್ತರ ಕನ್ನಡದ ಭವಿಷ್ಯದ ಕುರಿತು ತಮ್ಮ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಬಲಸೆ ಆಗ್ರಹಿಸಿದ್ದಾರೆ.

ಕಸ್ತೂರಿರಂಗನ್ ವರದಿ ಕುರಿತು ವಿಧಾನಮಂಡಲದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮಂಕಾಳ ವೈದ್ಯರು ಉತ್ತರ ಕನ್ನಡ ಜಿಲ್ಲೆಯ ಕುರಿತು ಮಾತನಾಡಿರುವ ಕೆಲವು ವಿಚಾರಗಳು ಜಿಲ್ಲೆಯ ಜನರಲ್ಲಿ ಆಕ್ರೋಶ ಹಾಗೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಸಮುದ್ರ, ನದಿಗಳು, ಪಶ್ಚಿಮಘಟ್ಟದ ಅರಣ್ಯ, ಕೃಷಿ, ಮೀನುಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿರುವ ವಿಶಿಷ್ಟ ಜಿಲ್ಲೆ. ಹೀಗಾಗಿ ಜಿಲ್ಲೆಯ ಕುರಿತು ಮಾತನಾಡುವಾಗ ಜನರ ಭಾವನೆ, ಜಿಲ್ಲೆಯ ಸ್ವಾಭಿಮಾನ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಮಾಸ್ತಪ್ಪ ನಾಯ್ಕ ಹೇಳಿದ್ದಾರೆ.

ಮಂಕಾಳ ವೈದ್ಯರು ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದು, ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ಉಪಸಭಾಪತಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ತರ ಕನ್ನಡವನ್ನು ಗೋವಾ ರಾಜ್ಯದೊಂದಿಗೆ ಹೋಲಿಕೆ ಮಾಡಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಹೀಗಾಗಿ ಆ ಹೇಳಿಕೆಯನ್ನು ಹಿಂಪಡೆದು ಜಿಲ್ಲೆಯ ಜನರ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಸ್ತೂರಿರಂಗನ್ ವರದಿಯಿಂದ ಉತ್ತರ ಕನ್ನಡದ ಅರಣ್ಯ ಪ್ರದೇಶ, ಕೃಷಿ, ತೋಟಗಾರಿಕೆ, ಜನವಸತಿ ಹಾಗೂ ಸ್ಥಳೀಯರ ಜೀವನೋಪಾಯದ ಮೇಲೆ ಪರಿಣಾಮ ಉಂಟಾಗಬಹುದೆಂಬ ಆತಂಕವನ್ನು ಜಿಲ್ಲೆಯ ಜನರು ಹಲವು ವರ್ಷಗಳಿಂದ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದಲ್ಲಿ ಮಂಕಾಳ ವೈದ್ಯರ ನಿಲುವೇನು, ವರದಿಯ ಪರಿಣಾಮಗಳಿಂದ ಜಿಲ್ಲೆಯನ್ನು ರಕ್ಷಿಸಲು ಸರ್ಕಾರದ ಮುಂದೆ ಯಾವ ಬೇಡಿಕೆಗಳನ್ನು ಇಟ್ಟಿದ್ದಾರೆ ಹಾಗೂ ಜನರ ಹೋರಾಟಗಳಲ್ಲಿ ಯಾವ ರೀತಿಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ದಾಖಲೆ ಸಮೇತ ಸ್ಪಷ್ಟಪಡಿಸಬೇಕು ಎಂದು ಮಾಸ್ತಪ್ಪ ನಾಯ್ಕ ಹೇಳಿದ್ದಾರೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಕೇಣಿ ಬಂದರು, ಕಾಸರಕೋಡು-ಟೊಂಕ ಬಂದರು ಹಾಗೂ ಬೇಡ್ತಿ-ವರದಾ ನದಿ ಜೋಡಣೆ ಸೇರಿದಂತೆ ಹಲವು ಯೋಜನೆಗಳ ಕುರಿತು ಜಿಲ್ಲೆಯಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗಬಾರದು. ಜಿಲ್ಲೆಯ ನೈಸರ್ಗಿಕ ಸಂಪತ್ತು ಹಾಗೂ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳ ಕುರಿತು ನಿಲುವು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಮಂಕಾಳ ವೈದ್ಯರು ಸಚಿವರಾಗಿದ್ದ ಅವಧಿಯಲ್ಲಿ ವೆಂಕಟಾಪುರ ಭಾಗದಲ್ಲಿ ಸುಮಾರು 13 ಎಕರೆ ಭೂಮಿ ಖರೀದಿಸಿದ್ದರು ಎಂದು ಉಲ್ಲೇಖಿಸಿರುವ ಮಾಸ್ತಪ್ಪ ನಾಯ್ಕ, ಇದೀಗ ಆ ಪ್ರದೇಶದಲ್ಲಿ ಕಾಡು ಹಾಗೂ ಹಾಡಿ ಪ್ರದೇಶದ ಮೂಲಕ ಸುಮಾರು 7 ಕಿಲೋಮೀಟರ್ ಉದ್ದದ ವೈಯಕ್ತಿಕ ರಸ್ತೆ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ರಸ್ತೆ ನಿರ್ಮಾಣಕ್ಕೆ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆಯೇ? ಅರಣ್ಯ ಅಥವಾ ಹಾಡಿ ಪ್ರದೇಶಕ್ಕೆ ಸಂಬಂಧಿಸಿದ ಭೂಮಿ ಒಳಗೊಂಡಿದ್ದರೆ ಮರ ತೆರವು ಸೇರಿದಂತೆ ಕಾಮಗಾರಿಗೆ ಅರಣ್ಯ ಹಾಗೂ ಪರಿಸರ ಇಲಾಖೆಯ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಮಂಕಾಳ ವೈದ್ಯರು ಹಾಗೂ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ದಾಖಲೆ ಸಮೇತ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದಶಕಗಳಿಂದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳು ಮನೆ, ಬಾವಿ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಅನುಮತಿ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಹಾಗಿದ್ದರೆ ಪ್ರಭಾವಿ ವ್ಯಕ್ತಿಗಳ ಭೂಮಿಗೆ ಸಂಬಂಧಿಸಿದ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ನಿಯಮಗಳು ಹೇಗೆ ಅನ್ವಯವಾಗಿವೆ ಎಂಬುದನ್ನೂ ಅರಣ್ಯ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಮಾಸ್ತಪ್ಪ ನಾಯ್ಕ ಹೇಳಿದ್ದಾರೆ.

ಸಾಮಾನ್ಯ ಜನರಿಗೆ ಒಂದು ನಿಯಮ, ಪ್ರಭಾವಿ ವ್ಯಕ್ತಿಗಳಿಗೆ ಮತ್ತೊಂದು ನಿಯಮ ಇರಬಾರದು. ವೆಂಕಟಾಪುರದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಅರಣ್ಯ ಇಲಾಖೆ ಸಾರ್ವಜನಿಕರ ಮುಂದೆ ಇಡಬೇಕು. ಎಲ್ಲವೂ ಕಾನೂನುಬದ್ಧವಾಗಿದ್ದರೆ ದಾಖಲೆಗಳ ಮೂಲಕ ಸ್ಪಷ್ಟಪಡಿಸಬೇಕು; ನಿಯಮ ಉಲ್ಲಂಘನೆಯಾಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಉತ್ತರ ಕನ್ನಡದ ಜನರು ಈಗ ಜಾಗೃತರಾಗಿದ್ದು, ಕೇವಲ ಭರವಸೆ ಹಾಗೂ ರಾಜಕೀಯ ಹೇಳಿಕೆಗಳಿಂದ ಅವರನ್ನು ನಂಬಿಸಲು ಸಾಧ್ಯವಿಲ್ಲ. ಜನಪ್ರತಿನಿಧಿಗಳು ಏನು ಮಾತನಾಡುತ್ತಾರೆ ಎನ್ನುವುದಕ್ಕಿಂತ, ಜಿಲ್ಲೆಗಾಗಿ ಏನು ಮಾಡಿದ್ದಾರೆ ಎಂಬುದಕ್ಕೆ ದಾಖಲೆ ಬೇಕು ಎಂದು ಮಾಸ್ತಪ್ಪ ನಾಯ್ಕ ಹೇಳಿದ್ದಾರೆ.ಕಸ್ತೂರಿರಂಗನ್ ವರದಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಬಂದರು ಯೋಜನೆಗಳು, ಬೇಡ್ತಿ-ವರದಾ ನದಿ ಜೋಡಣೆ ಅಥವಾ ಅರಣ್ಯ-ಹಾಡಿ ಭೂಮಿಯ ವಿಚಾರವಾಗಲಿ, ಪ್ರತಿಯೊಂದು ವಿಷಯದಲ್ಲೂ ಸರ್ಕಾರದ ದಾಖಲೆಗಳು ಜನರ ಮುಂದೆ ಬರಬೇಕು. ಉತ್ತರ ಕನ್ನಡದ ಭವಿಷ್ಯದ ವಿಚಾರದಲ್ಲಿ ರಾಜಕೀಯಕ್ಕಿಂತ ಜಿಲ್ಲೆಯ ಹಿತವೇ ಮುಖ್ಯ ಎಂದು ಅವರು ತಿಳಿಸಿದ್ದಾರೆ.

ಉತ್ತರ ಕನ್ನಡಕ್ಕೆ ಬೇಕಿರುವುದು ಗೋವಾ ರಾಜ್ಯದೊಂದಿಗೆ ವಿಲೀನದ ಹೋಲಿಕೆಯಲ್ಲ, ಜಿಲ್ಲೆಯ ಸಮಗ್ರ ಅಭಿವೃದ್ಧಿ. ಜಿಲ್ಲೆಯ ಜನರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ಹಿಂಪಡೆದು, ಜನರ ಮುಂದೆ ಕ್ಷಮೆ ಕೇಳುವುದು ಮಂಕಾಳ ವೈದ್ಯರ ಜವಾಬ್ದಾರಿ ಎಂದು ಮಾಸ್ತಪ್ಪ ನಾಯ್ಕ ಬಲಸೆ ಆಗ್ರಹಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share