ಬೈಪಾಸ್ ರಸ್ತೆ ತಡೆದು ಪ್ರತಿಭಟನೆ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಶಿರಸಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಠಾಣ ಹಾಗೂ ಅತಿಕ್ರಮಣ ಪ್ರದೇಶಗಳಲ್ಲಿರುವ ಮನೆ–ನಿವೇಶನಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವ ಸರ್ಕಾರದ ಕ್ರಮ ವಿರೋಧಿಸಿ ಹಾಗೂ ವಿವಿಧ ಮೂಲಸೌಕರ್ಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುಡ್ನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ‘ನಮ್ಮ ಮನೆ–ನಮ್ಮ ಹಕ್ಕು’ ಜನಾಗ್ರಹ ಆಂದೋಲನ ನಡೆಯಿತು.
ಗುಡ್ನಾಪುರ ಗ್ರಾಪಂ ವ್ಯಾಪ್ತಿಯ ಹದಗೆಟ್ಟ ರಸ್ತೆಗಳ ದುರಸ್ತಿ, ಬನವಾಸಿ ವಿದ್ಯುತ್ ಗ್ರಿಡ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದು, ಶಿರಸಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವುದು ಹಾಗೂ ಗುಡ್ನಾಪುರ ಕೆರೆಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಿರಸಿ–ದಾಸನಕೊಪ್ಪ ಬೈಪಾಸ್ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ ನಾಯ್ಕ ಮಾತನಾಡಿ, ಗುಡ್ನಾಪುರ ಗ್ರಾಪಂ ವ್ಯಾಪ್ತಿಯ ಸುಮಾರು ಶೇ.80ರಷ್ಟು ಜನರು ಗ್ರಾಮಠಾಣ ಹಾಗೂ ಅತಿಕ್ರಮಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮನೆಗಳ ತೆರಿಗೆ ಹಾಗೂ ದಾಖಲೆಗಳಿಗೆ ಸಂಬಂಧಿಸಿದ ನಿರ್ಧಾರಗಳಿಂದ ಜನರು ಸಂಕಷ್ಟಕ್ಕೆ ಸಿಲುಕುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಬನವಾಸಿ ವಿದ್ಯುತ್ ಗ್ರಿಡ್ ಕಾಮಗಾರಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ವಿದ್ಯುತ್ ಕೊರತೆಯಿಂದ ತೋಟಗಳು ಒಣಗುತ್ತಿವೆ. ಗ್ರಿಡ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು.
ಗುಡ್ನಾಪುರ ಕೆರೆಯನ್ನು ಅವಲಂಬಿಸಿ ಸಾವಿರಾರು ಎಕರೆ ಕೃಷಿ ಜಮೀನಿದ್ದು, ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ತುಂಬಿಸುವ ಸಂದರ್ಭದಲ್ಲಿ ಗುಡ್ನಾಪುರ ಕೆರೆಗೆ ನೀರು ಹರಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಕ್ಷೇತ್ರದ ವಿವಿಧ ಸಮಸ್ಯೆಗಳಿಗೆ ಶಾಸಕ ಶಿವರಾಮ ಹೆಬ್ಬಾರ್ ಅವರೇ ಹೊಣೆ ಎಂದು ಟೀಕಿಸಿದರು.
ಬನವಾಸಿ ಮಂಡಲ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪ್ರಶಾಂತ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆ ನಷ್ಟದಿಂದ ರೈತರು ಆರ್ಥಿಕ ತೊಂದರೆ ಎದುರಿಸುತ್ತಿದ್ದು, ಶಿರಸಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಗುಡ್ನಾಪುರ ಗ್ರಾ.ಪಂ ವ್ಯಾಪ್ತಿಯ ಹಲವು ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕೂಡಲೇ ರಸ್ತೆಗಳ ದುರಸ್ತಿ ಅಥವಾ ಮರುನಿರ್ಮಾಣ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬನವಾಸಿ ಮಂಡಲ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಾಶಿ ಮಾತನಾಡಿ, ಸಮಸ್ಯೆಗಳನ್ನು ಶೀಘ್ರ ಪರಿಹರಿಸದಿದ್ದರೆ ಬನವಾಸಿ ಹೋಬಳಿ ಮಟ್ಟದಲ್ಲಿ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಪಟ್ಟರಾಜಗೌಡ ಹಾಗೂ ಎಡಬ್ಲ್ಯು ನಾಗರಾಜ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಬೇಡಿಕೆಗಳ ಕುರಿತು ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷ ಶಂಭುಗೌಡ ಮುಧುರವಳ್ಳಿ, ಮಂಡಲ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮು ಮಡಿವಾಳ, ಸದಾನಂದ ನಾಯ್ಕ, ವಸಂತ ನಾಯ್ಕ, ರಾಜು ನಾಯ್ಕ, ಶಾಂತಮೂರ್ತಿ, ನರೇಂದ್ರ ಪಾಟೇಗೌಡ, ಪ್ರೇಮ್ ಗೌಡ, ಮಾಲತೇಶ್ ಕಾಂತ್ರಾಜಿ, ಹರೀಶ್, ಪುಟ್ಟಸ್ವಾಮಿ, ಸುಜಿತ್, ಅಶ್ವಿನ್, ಭರತ, ಚಾಮರಾಜ, ಮಹೇಶ್, ಸಂತೋಷ್ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.


