ಅಂಕೋಲಾ: ಭಾರತೀಯ ಜನತಾ ಪಕ್ಷದ ಉತ್ತರ ಕನ್ನಡ ಘಟಕದ ‘ಜನಾಗ್ರಹ ಆಂದೋಲನ–ನಮ್ಮ ಮನೆ ನಮ್ಮ ಹಕ್ಕು’ ಅಭಿಯಾನದ ಅಂಗವಾಗಿ ಅಂಕೋಲಾ ಮಂಡಲದ ಅಗಸೂರು ಮಹಾಶಕ್ತಿ ಕೇಂದ್ರದ ಡೋಂಗ್ರಿ ಶಕ್ತಿ ಕೇಂದ್ರ ವ್ಯಾಪ್ತಿಯ ಡೋಂಗ್ರಿ ಗ್ರಾಮ ಪಂಚಾಯಿತಿಯಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಪ್ರಕೋಷ್ಟಗಳ ಸಹ ಸಂಚಾಲಕ ರಾಘವೇಂದ್ರ ಭಟ್ಟ ಮಾತನಾಡಿ, ನಿಮ್ಮ ಜೊತೆ ನಾವಿದ್ದೇವೆ. ಹೆದರುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಹೋರಾಟಕ್ಕೆ ಬರಬೇಕು. ನಮ್ಮ ಹೋರಾಟ ಜನರಿಗಾಗಿ ಎಂದರು.
ಜಿಲ್ಲಾ ಕಾರ್ಯದರ್ಶಿ ನಿತ್ಯಾನಂದ ಗಾಂವ್ಕರ್ ಮಾತನಾಡಿ, ರಾಜ್ಯ ಸರ್ಕಾರದ ಸುತ್ತೋಲೆಯಂತೆ ಪಂಚಾಯಿತಿಗಳು ಇನ್ನು ಮುಂದೆ ತೆರಿಗೆ ಸ್ವೀಕರಿಸುವುದಿಲ್ಲ. ಕ್ರಮೇಣ ಜನರಿಂದ ಅವರ ಮನೆಗಳ ಹಕ್ಕನ್ನು ಕಸಿದುಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಆರೋಪಿಸಿದರು. ಬಿಜೆಪಿ ಯಾವಾಗಲೂ ಜನರ ಪರವಾಗಿದ್ದು, ‘ನಮ್ಮ ಮನೆ ನಮ್ಮ ಹಕ್ಕು’ ಉಳಿಸಿಕೊಳ್ಳುವ ಹೋರಾಟದಲ್ಲಿ ಜನರೊಂದಿಗೆ ಇರುತ್ತದೆ ಎಂದರು.
ಡೋಂಗ್ರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಪುಟ್ಟು ಮಾತನಾಡಿ, ಪಕ್ಷಾತೀತವಾಗಿ ಎಲ್ಲರೂ ಈ ಹೋರಾಟಕ್ಕೆ ಸಹಕರಿಸಬೇಕು. ನಾವೆಲ್ಲರೂ ಜನರೊಂದಿಗೆ ಇದ್ದೇವೆ ಎಂದರು.
ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ, ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಎಲ್ಲರೂ ವಿರೋಧಿಸಬೇಕು. ಜನರ ಮನೆ ಹಾಗೂ ಕಟ್ಟಡಗಳನ್ನು ತೆರವುಗೊಳಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಆರೋಪಿಸಿದರು.
ಮಂಡಲ ಪ್ರಭಾರಿ ಅಧ್ಯಕ್ಷ ಸಂಜಯ್ ನಾಯ್ಕ ಮಾತನಾಡಿ, ಬಿಜೆಪಿ ಯಾವಾಗಲೂ ಜನರೊಂದಿಗೆ ಇರುತ್ತದೆ. ಮುಂದಿನ ಹೋರಾಟಗಳಿಗೆ ಕರೆ ನೀಡಿದಾಗ ಅಕ್ಕಪಕ್ಕದವರನ್ನೂ ಕರೆತಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದರು.
ಸುಧಾಕರ ಭಟ್ಟ ಮನವಿ ಓದಿದರು. ಬಳಿಕ ಡೋಂಗ್ರಿ ಪಂಚಾಯಿತಿ ಪಿಡಿಒ ಮಾದೇವ ಗೌಡ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಂಕೋಲಾ ಮಂಡಲಾಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಮಂಡಲ ಕಾರ್ಯದರ್ಶಿಗಳಾದ ಚಂದ್ರಕಾಂತ ನಾಯ್ಕ ಹಾಗೂ ನಾಗೇಶ ಕಿಣಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ ಸ್ವಾಗತಿಸಿದರು. ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ವಿ.ಎಸ್. ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಮೋರ್ಚಾದ ಶಶಾಂಕ ಹೆಗಡೆ ಹಾಗೂ ಬೂತ್ ಅಧ್ಯಕ್ಷ ಶೇಖರ ಗಾಂವ್ಕರ್ ಕಾರ್ಯಕ್ರಮ ನಿರೂಪಿಸಿದರು. ರೈತ ಮೋರ್ಚಾದ ರಾಘು ಹೆಗಡೆ ವಂದಿಸಿದರು.


