Friday, October 23, 2026
HomeLocal Newsಸಹ್ಯಾದ್ರಿ ಸೊಸೈಟಿ | ದೃಢೀಕರಣ ಪತ್ರವಿಲ್ಲದ ಲೆಕ್ಕಗಳ ತನಿಖೆಗೆ ನಿರ್ದೇಶಕರ ಆಗ್ರಹ

ಸಹ್ಯಾದ್ರಿ ಸೊಸೈಟಿ | ದೃಢೀಕರಣ ಪತ್ರವಿಲ್ಲದ ಲೆಕ್ಕಗಳ ತನಿಖೆಗೆ ನಿರ್ದೇಶಕರ ಆಗ್ರಹ

ಬೆಂಗಳೂರಿನ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದ ನಿರ್ದೇಶಕರು

ಯಲ್ಲಾಪುರ: ಕಳಚೆಯ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025-26ನೇ ಸಾಲಿನ ಲೆಕ್ಕಪತ್ರಗಳಲ್ಲಿ ದೃಢೀಕರಣ ದಾಖಲೆಗಳಿಲ್ಲದ ಮೊತ್ತಗಳನ್ನು ನಮೂದಿಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಸಂಘದ ನಿರ್ದೇಶಕರಾದ ಸೂರ್ಯನಾರಾಯಣ ಸಾಂಬ ಭಟ್ಟ (ಕೆಡಿಸಿಸಿ ಬ್ಯಾಂಕ್ ಪ್ರತಿನಿಧಿ), ಗಜಾನನ ಗಣಪತಿ ಭಟ್ಟ, ಶ್ರೀಪಾದ ಶಿವರಾಮ ಗಾಂವ್ಕರ್, ಶ್ರೀನಾಥ ತಮ್ಮಯ್ಯ ಹೆಗಡೆ ಹಾಗೂ ಅರುಣ ಗುರುನಾಥ ನಾಯ್ಕ, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಸಂಘದ ನೈಜ ಆರ್ಥಿಕ ಚಿತ್ರಣವನ್ನು ಷೇರುದಾರರಿಗೆ ಒದಗಿಸುವಂತೆ ಬೆಂಗಳೂರಿನ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಸಂಘದ 2025-26ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಆ.26ರಂದು ನಡೆದಿದ್ದು, ಸಭೆಯ ವೇಳೆ ಅಢಾವೆ ಪತ್ರಿಕೆ ಪರಿಶೀಲಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಬರಬೇಕಾದ ಶೇ.3ರ ಪ್ರೋತ್ಸಾಹಧನ ರೂ.5,13,527, ಕೇಂದ್ರ ಸರ್ಕಾರದ ಶೇ.2ರ ಬಡ್ಡಿ ಸಹಾಯಧನ ರೂ.2,02,817, ರಾಜ್ಯ ಸರ್ಕಾರದಿಂದ ಬರಬೇಕಾದ ಬಡ್ಡಿ ರೂ.23,10,285 ಹಾಗೂ ಕೆಡಿಸಿಸಿ ಬ್ಯಾಂಕ್‌ನಿಂದ ಬರಬೇಕಾದ ಬಡ್ಡಿ ರೂ.18,54,674 ಎಂದು ನಮೂದಿಸಿರುವುದು ಕಂಡುಬಂದಿದೆ.

ಈ ಮೊತ್ತಗಳಿಗೆ ಸಂಬಂಧಿಸಿದ ದೃಢೀಕರಣ ಪತ್ರಗಳು ಇಲ್ಲದಿರುವ ಕುರಿತು ಸಭೆಯಲ್ಲಿ ತಾವು ಹಾಗೂ ಹಲವು ಷೇರುದಾರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವಿಷಯದ ಕುರಿತು ಆಡಳಿತ ಮಂಡಳಿ ಸಭೆಯಲ್ಲಿಯೂ ಕೆಲವು ನಿರ್ದೇಶಕರು ಈಗಾಗಲೇ ಆಕ್ಷೇಪಣೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.

ಈ ಮೊತ್ತಗಳ ಪೈಕಿ ರೂ.7 ಲಕ್ಷವನ್ನು ಸಂಘದ ಖರ್ಚಿಗೆ ಹಾಕಿ ಮಂಜೂರಿ ಪಡೆಯಲು ಸಲ್ಲಿಸಿರುವುದಕ್ಕೂ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಸುಮಾರು 2003ರಿಂದಲೇ ದೃಢೀಕರಣ ಪತ್ರಗಳಿಲ್ಲದ ಮೊತ್ತಗಳನ್ನು ಇದೇ ರೀತಿಯಲ್ಲಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಭೆಯಲ್ಲಿ ಆಂತರಿಕ ಲೆಕ್ಕ ಪರಿಶೋಧಕರನ್ನು ಈ ಕುರಿತು ಪ್ರಶ್ನಿಸಿದಾಗ, ಸಂಘದ ಲೆಕ್ಕಪತ್ರಗಳ ನಿರ್ವಹಣೆ ಹಾಗೂ ನಮೂದಿಸುವಿಕೆಯಲ್ಲಿ ತಪ್ಪಾಗಿರುವುದರಿಂದ ಸಂಘದ ನೈಜ ಚಿತ್ರಣ ದೊರೆಯುವುದಿಲ್ಲ ಹಾಗೂ ವ್ಯತ್ಯಾಸ ಉಂಟಾಗುತ್ತದೆ ಎಂದು ಅವರು ಸಭೆಗೆ ತಿಳಿಸಿರುವುದಾಗಿ ನಿರ್ದೇಶಕರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

2025-26ನೇ ಸಾಲಿನ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ದೃಢೀಕರಣ ಪತ್ರಗಳನ್ನು ಪರಿಶೀಲಿಸದೆ, ಅಂತಹ ದಾಖಲೆಗಳಿಲ್ಲದೆಯೇ ಮೊತ್ತಗಳನ್ನು ಲಾಭದಲ್ಲಿ ಅನುಮತಿಸುವುದು ಸರಿಯಾದ ಕ್ರಮವಲ್ಲ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದು, ದೃಢೀಕರಣ ಪತ್ರಗಳು ಇಲ್ಲದಿದ್ದರೆ ಅದಕ್ಕೆ ಹೊಣೆಗಾರರನ್ನು ಗುರುತಿಸಿ ಜವಾಬ್ದಾರರನ್ನಾಗಿ ಮಾಡಬೇಕೇ ಹೊರತು ವಿಷಯವನ್ನು ಮರೆಮಾಚಿ ಲೆಕ್ಕದಲ್ಲಿ ಮುಂದುವರಿಸುವುದು ಕಾನೂನುಸಮ್ಮತ ಹಾಗೂ ನ್ಯಾಯಸಮ್ಮತ ಕ್ರಮವಲ್ಲ ಎಂದು ಅವರು ತಿಳಿಸಿದ್ದಾರೆ.

ಆದ್ದರಿಂದ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಲೆಕ್ಕಪತ್ರಗಳು ಮತ್ತು ಸಂಬಂಧಿತ ದಾಖಲೆಗಳ ಕುರಿತು ಕೂಲಂಕಷ ತನಿಖೆ ನಡೆಸಿ, ಸಂಘದ ನೈಜ ಚಿತ್ರಣವನ್ನು ಷೇರುದಾರರಿಗೆ ಒದಗಿಸುವ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share