ಶಿರಸಿ: ತೋಟದ ಗೇಟ್ನ ಬೀಗ ಒಡೆದು ಹಾಗೂ ತಂತಿ ಬೇಲಿಯನ್ನು ಬಗ್ಗಿಸಿ ಒಳನುಗ್ಗಿದ ಕಳ್ಳರು ಸುಮಾರು 3 ಕ್ವಿಂಟಾಲ್ ಹಸಿ ಅಡಿಕೆಯನ್ನು ಕದ್ದೊಯ್ದ ಘಟನೆ ತಾಲೂಕಿನ ಕಾಳಂಗಿ ಗ್ರಾಮದಲ್ಲಿ ನಡೆದಿದೆ.
ಕಾಳಂಗಿ ಗ್ರಾಮದ ದಾಸನಕೊಪ್ಪ ನಿವಾಸಿ ಶಿವಯೋಗಿ ಸಿ. ಬಾಳಿಕಾಯಿಮಠ (43) ಅವರು ವಕೀಲರಾಗಿದ್ದು, ಕೃಷಿಕರೂ ಆಗಿದ್ದಾರೆ. ಕಾಳಂಗಿ ಗ್ರಾಮದ ಸರ್ವೆ ನಂ. 4/1, 4/4 ಹಾಗೂ ಅವರ ಅಕ್ಕ ಮಮತಾ ಅವರ ಹೆಸರಿನಲ್ಲಿರುವ ಸರ್ವೆ ನಂ. 44/2ರಲ್ಲಿ ಒಟ್ಟು 1 ಎಕರೆ 14 ಗುಂಟೆ ಜಮೀನು ಹೊಂದಿದ್ದಾರೆ. ಈ ಜಮೀನಿನಲ್ಲಿ ಅಡಿಕೆ ಬೆಳೆ ಬೆಳೆದಿದ್ದರು.
ಶಿವಯೋಗಿ ಅವರು ಸೆ.20ರಂದು ತಮ್ಮ ತೋಟಕ್ಕೆ ತೆರಳಿ ವಾಪಸ್ ಬಂದಿದ್ದರು. ಬಳಿಕ ಸೆ.22ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ತೋಟದ ಕೆಲಸಕ್ಕೆ ಬಂದಿದ್ದ ಮಂಜುನಾಥ ದೇವೇಂದ್ರಪ್ಪ ಚನ್ನಯ್ಯ ಅವರು ಕರೆ ಮಾಡಿ, ತೋಟದಲ್ಲಿ ಯಾರೋ ಕಳ್ಳರು ತೋಟದಿಂದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ.
ತಕ್ಷಣ ಮಧ್ಯಾಹ್ನ 12.30ರ ಸುಮಾರಿಗೆ ತೋಟಕ್ಕೆ ತೆರಳಿ ಪರಿಶೀಲಿಸಿದಾಗ, ತೋಟಕ್ಕೆ ಅಳವಡಿಸಿದ್ದ ಗೇಟ್ನ ಬೀಗವನ್ನು ಒಡೆದು, ತಂತಿ ಬೇಲಿಯನ್ನು ಬಗ್ಗಿಸಿ ಒಳನುಗ್ಗಿದ್ದ ಕಳ್ಳರು 30ರಿಂದ 40 ಹಸಿ ಅಡಿಕೆ ಕೊನೆಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ. ಕಳುವಾದ ಅಡಿಕೆಯ ಒಟ್ಟು ಅಂದಾಜು ತೂಕ ಸುಮಾರು 3 ಕ್ವಿಂಟಾಲ್ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಶಿವಯೋಗಿ ಸಿ. ಬಾಳಿಕಾಯಿಮಠ ಅವರು ನೀಡಿದ ದೂರಿನ ಮೇರೆಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


