Friday, October 23, 2026
HomeLocal Newsಅಧಿಕೃತ ಸೊಪ್ಪಿನ ಬೆಟ್ಟದಲ್ಲೇ ಮುಳ್ಳುಬಿದಿರು ನೆಟ್ಟ ಅರಣ್ಯ ಇಲಾಖೆ!

ಅಧಿಕೃತ ಸೊಪ್ಪಿನ ಬೆಟ್ಟದಲ್ಲೇ ಮುಳ್ಳುಬಿದಿರು ನೆಟ್ಟ ಅರಣ್ಯ ಇಲಾಖೆ!

ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಬ್ಗುಳಿ ಗ್ರಾಮದ ಗಣಪತಿ ವಿ. ಭಟ್ಟ ಅವರ ಅಧಿಕೃತ ಸೊಪ್ಪಿನ ಬೆಟ್ಟದಲ್ಲೇ ಅರಣ್ಯ ಇಲಾಖೆಯವರು ಮುಳ್ಳುಬಿದಿರು ಸಸಿಗಳನ್ನು ನೆಟ್ಟು ಸಮಸ್ಯೆ ಸೃಷ್ಟಿಸಲು ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ.

ರೈತರು ತಮ್ಮ ಕೃಷಿ ಜಮೀನಿನ ಭಾಗವಾಗಿ ಅಧಿಕೃತವಾಗಿ ಹೊಂದಿರುವ ಸೊಪ್ಪಿನ ಬೆಟ್ಟದಲ್ಲಿ ಈ ರೀತಿಯಾಗಿ ಸಸಿಗಳನ್ನು ನೆಡುವುದರಿಂದ ಮುಂದಿನ ದಿನಗಳಲ್ಲಿ ಬೆಟ್ಟದ ಹಕ್ಕು, ಬಳಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಸ್ಥಳೀಯ ರೈತರಲ್ಲಿ ಮೂಡಿತ್ತು.

ಸೊಪ್ಪಿನ ಬೆಟ್ಟದಲ್ಲಿ ಮುಳ್ಳುಬಿದಿರು ಬೆಳೆದರೆ ಅದರ ಬೇರು ಹಾಗೂ ಪೊದೆಗಳು ವ್ಯಾಪಕವಾಗಿ ಹರಡುವುದರಿಂದ ಬೆಟ್ಟದ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ. ಸೊಪ್ಪು ಕಡಿಯುವುದು, ಜಾನುವಾರುಗಳನ್ನು ಮೇಯಿಸುವುದು ಸೇರಿದಂತೆ ರೈತರು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ಚಟುವಟಿಕೆಗಳಿಗೂ ಅಡ್ಡಿಯಾಗಬಹುದು.

ಮುಂದೆ ಈ ಪ್ರದೇಶವನ್ನು ಅರಣ್ಯ ಇಲಾಖೆಯ ನೆಡುತೋಪು ಅಥವಾ ಅರಣ್ಯ ಪ್ರದೇಶವೆಂದು ಪರಿಗಣಿಸುವ ಪರಿಸ್ಥಿತಿ ನಿರ್ಮಾಣವಾದರೆ, ರೈತರು ತಮ್ಮದೇ ಅಧಿಕೃತ ಸೊಪ್ಪಿನ ಬೆಟ್ಟದಲ್ಲಿ ಓಡಾಡುವುದಕ್ಕೂ, ನಿರ್ವಹಣೆ ಮಾಡುವುದಕ್ಕೂ ಸಮಸ್ಯೆ ಎದುರಾಗುವ ಆತಂಕವಿದೆ.

ಈ ಹಿನ್ನೆಲೆಯಲ್ಲಿ ಬೆಟ್ಟ ಹೋರಾಟ ಸಮಿತಿ ಯಲ್ಲಾಪುರದ ನಿಯೋಗವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ರೈತರ ಅಧಿಕೃತ ಸೊಪ್ಪಿನ ಬೆಟ್ಟದಲ್ಲಿ ಈ ರೀತಿಯಾಗಿ ಮುಳ್ಳುಬಿದಿರು ನೆಟ್ಟು ಸಮಸ್ಯೆ ಸೃಷ್ಟಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಿದರು. ಈ ಕ್ರಮ ಮುಂದುವರಿದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನಿಯೋಗ ನೀಡಿತು.

ಇದರ ನಡುವೆ, ಸ್ಥಳದಲ್ಲಿ ಅಳವಡಿಸಿರುವ ಫಲಕ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಫಲಕದಲ್ಲಿ 20 ಹೆಕ್ಟೇರ್ ಪ್ರದೇಶದಲ್ಲಿ 8 ಸಾವಿರ ಸಸಿಗಳನ್ನು ನೆಡಲಾಗಿದೆ ಎಂದು ನಮೂದಿಸಲಾಗಿದೆ. ಆದರೆ ಸ್ಥಳ ಪರಿಶೀಲನೆ ವೇಳೆ 20 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಮಾಡಿರುವುದು ಕಂಡುಬಂದಿಲ್ಲ. 8 ಸಾವಿರ ಸಸಿಗಳಿರಲಿ, ಎರಡು ಸಾವಿರ ಸಸಿಗಳನ್ನೂ ನೆಟ್ಟಿರುವುದು ಕಾಣಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಅಷ್ಟೇ ಅಲ್ಲ, ಬೆಳೆಸಿದ ಸಸಿಗಳನ್ನು ಸೂಕ್ತ ಸ್ಥಳದಲ್ಲಿ ನೆಡದೆ ಅಲ್ಲಲ್ಲಿ ರಾಶಿ ರಾಶಿಯಾಗಿ ಬಿಸಾಡಿರುವುದು ಕೂಡ ಸ್ಥಳದಲ್ಲಿ ಕಂಡುಬಂದಿದೆ. ಹೀಗಿರುವಾಗ ಫಲಕದಲ್ಲಿ ನಮೂದಿಸಿರುವ 20 ಹೆಕ್ಟೇರ್ ಪ್ರದೇಶ ಹಾಗೂ 8 ಸಾವಿರ ಸಸಿಗಳ ಲೆಕ್ಕಾಚಾರ ಹೇಗೆ ಬಂದಿದೆ ಎಂಬ ಪ್ರಶ್ನೆ ಎದುರಾಗಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕಾಗಿದೆ.

ಚರ್ಚೆಯ ಬಳಿಕ ರೈತರಿಗೆ ಇನ್ನು ಮುಂದೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಹಾಗೂ ಈ ರೀತಿಯ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿರುವುದಾಗಿ ನಿಯೋಗ ಮಾಹಿತಿ ನೀಡಿದೆ.

ನಿಯೋಗದಲ್ಲಿ ಬೆಟ್ಟ ಹೋರಾಟ ಸಮಿತಿ ಯಲ್ಲಾಪುರದ ಸಂಚಾಲಕ ಕೆ.ಟಿ. ಹೆಗಡೆ, ಹರಿಪ್ರಕಾಶ್ ಕೋಣೆಮನೆ, ವೆಂಕಟರಮಣ ಬೆಳ್ಳಿ, ವಿಶ್ವನಾಥ್ ಹಳೆಮನೆ ಹಾಗೂ ಸ್ಥಳೀಯ ರೈತರು ಇದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share