ಯಲ್ಲಾಪುರ: ಇತ್ತೀಚಿನ ವರ್ಷಗಳಲ್ಲಿ ಸಹಕಾರಿ ಸಂಘಗಳ ವಾರ್ಷಿಕ ಸಾಮಾನ್ಯ ಸಭೆಯೆಂದರೆ, ಒಂದಿಷ್ಟು ಆರೋಪ-ಪ್ರತ್ಯಾರೋಪಗಳು, ಗದ್ದಲಗಳು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಅದಿಲ್ಲದೇ ಸಭೆಯೇ ಅಪೂರ್ಣ ಎಂಬ ಹಂತಕ್ಕೇ ತಲುಪಿಬಿಟ್ಟಿದೆ ಎಂಬುದು ಸದಸ್ಯರ ಅಭಿಪ್ರಾಯ. ಇತ್ತೀಚೆಗೆ ನಡೆದ ಯಲ್ಲಾಪುರ ಟಿಎಂಎಸ್ ಸಂಸ್ಥೆಯ ವಾರ್ಷಿಕ ಸಭೆಯೂ ಇಂಥದೊಂದು ಪ್ರಶ್ನಾವಳಿಗಳಿಗೆ ಸಾಕ್ಷಿಯಾಯಿತು.
ಟಿಎಂಎಸ್ ಸಂಸ್ಥೆಗೆ ಮಂಜೂರಾಗಿದ್ದ ಜಾಗವನ್ನು ಸಂಸ್ಥೆಯ ಹೆಸರಿಗೆ ನೋಂದಾಯಿಸಿದ ಬಳಿಕವೂ ಅದನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಉದ್ಯಮಿ ಬಾಲಕೃಷ್ಣ ನಾಯಕ ನಡೆಸಿದ ಪ್ರಯತ್ನ ಹಾಗೂ ಅಂದಿನ ಸಚಿವ ಶಿವರಾಮ ಹೆಬ್ಬಾರ ಅವರು ಈ ವಿಚಾರದಲ್ಲಿ ಪ್ರಭಾವ ಬಳಸಿ ಜಾಗವನ್ನು ಬಾಲಕೃಷ್ಣ ನಾಯಕ ಅವರಿಗೆ ಮಂಜೂರು ಮಾಡಿಸಲು ಯತ್ನಿಸಿದ ಬಗೆಗಿನ ಆರೋಪಗಳು ಯಲ್ಲಾಪುರ ಟಿಎಂಎಸ್ ವಾರ್ಷಿಕ ಮಹಾಸಭೆಯಲ್ಲಿ ಮತ್ತೆ ಮುನ್ನೆಲೆಗೆ ಬಂದವು.
ಟಿಎಂಎಸ್ ಸಭಾಭವನದಲ್ಲಿ ಸೆ.23ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ವಿಚಾರದ ಕುರಿತು ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ ಹಾಸಣಗಿ ಪ್ರಶ್ನಿಸಿದಾಗ ಸಂಸ್ಥೆಗೆ ಸೇರಿದ ಜಾಗದ ಹಕ್ಕಿನ ಕುರಿತು ನಡೆದ ಬೆಳವಣಿಗೆಗಳನ್ನು ಆಡಳಿತ ಮಂಡಳಿಯ ಪ್ರಮುಖರು ವಿವರಿಸಿದರು. ಯಲ್ಲಾಪುರ ಬಸ್ ನಿಲ್ದಾಣದ ಸಮೀಪವಿರುವ ಈ ಜಾಗದ ವಿಚಾರ ಹಲವು ವರ್ಷಗಳ ಹಿಂದಿನಿಂದಲೂ ಮುಂದುವರಿದಿದ್ದು, ಪ್ರಸ್ತುತ ಪ್ರಕರಣ ನ್ಯಾಯಾಲಯದಲ್ಲಿದೆ.
ಟಿ.ಜಿ. ಹೆಗಡೆ ಬೆಳಗುಂದ್ಲಿ ಅವರು ಟಿಎಂಎಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ದಿವಂಗತ ರಾಮಕೃಷ್ಣ ಹೆಗಡೆಯವರು ಹಣಕಾಸು ಸಚಿವರಾಗಿದ್ದರು. ಅವರು ಯಲ್ಲಾಪುರಕ್ಕೆ ಭೇಟಿ ನೀಡಿದ ವೇಳೆ ಟಿಎಂಎಸ್ ಸಂಸ್ಥೆಗೆ 5 ಎಕರೆ ಜಾಗ ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ರಾಮಕೃಷ್ಣ ಹೆಗಡೆಯವರು ಯಲ್ಲಾಪುರ ಬಸ್ ನಿಲ್ದಾಣದ ಬಳಿ ಸಂಸ್ಥೆಗೆ 2 ಎಕರೆ ಜಾಗ ಮಂಜೂರು ಮಾಡಿದ್ದರು.
ನಂತರ ಸಂಸ್ಥೆಯ ಆಡಳಿತ ಮಂಡಳಿ ಒಂದು ಎಕರೆ ಜಾಗಕ್ಕೆ ಹಣ ಪಾವತಿಸಿ ನೋಂದಾಯಿಸಿಕೊಂಡಿತ್ತು. ಅದರಲ್ಲಿ 3 ಗುಂಟೆ ಜಾಗವನ್ನು ಕೆಡಿಸಿಸಿ ಬ್ಯಾಂಕ್ಗೆ ಬಿಟ್ಟುಕೊಡಲಾಗಿತ್ತು.
ಇನ್ನೂ ಒಂದು ಎಕರೆ ಮಂಜೂರಾಗಿದ್ದರೂ ನೋಂದಣಿಯಾಗದೇ ಹಾಗೆಯೇ ಉಳಿದಿತ್ತು ಇದರಲ್ಲಿ ರಸ್ತೆ ಇತ್ಯಾದಿ ಬಳಕೆಗೆ ಬಿಟ್ಟ ಜಾಗದ ಹೊರತಾಗಿ ಟಿಎಂಎಸ್ ಸಂಸ್ಥೆಗೆ ಉಳಿದ ಅಂದಾಜು 38 ಗುಂಟೆ ಜಾಗ ಮಾತ್ರ ಕಾರಣಾಂತರಗಳಿಂದ ನೋಂದಣಿಯಾಗದೇ ಉಳಿದುಕೊಂಡಿತ್ತು.
2014ರಲ್ಲಿ ಎನ್.ಕೆ. ಭಟ್ ಅಗ್ಗಾಶಿಕುಂಬ್ರಿ ಅವರು ಟಿಎಂಎಸ್ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಸಂಸ್ಥೆಗೆ ಸಂಬಂಧಿಸಿದ ಪಹಣಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ ಈ 38 ಗುಂಟೆ ಜಾಗ ಮಂಜೂರಾಗಿದ್ದರೂ ಸಂಸ್ಥೆಯ ಹೆಸರಿಗೆ ದಾಖಲಾಗದೇ ಇರುವ ವಿಚಾರ ಗಮನಕ್ಕೆ ಬಂದಿತ್ತು.
ನಂತರ ದಾಖಲೆಗಳನ್ನು ಪರಿಶೀಲಿಸಿ, ಮಂಜೂರಾತಿಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಂಡು ಆ ಜಾಗವನ್ನು ಟಿಎಂಎಸ್ ಸಂಸ್ಥೆಯ ಹೆಸರಿಗೆ ನೋಂದಾಯಿಸುವಲ್ಲಿ ಯಶಸ್ವಿಯಾಗಿದ್ದರು.
ಇಲ್ಲಿಂದಲೇ ಜಾಗದ ವಿವಾದ ಮತ್ತೊಂದು ತಿರುವು ಪಡೆದುಕೊಂಡಿತು ಎಂಬುದು ಸಭೆಯಲ್ಲಿ ವಿವರಿಸಲಾದ ವಿಚಾರ. ಇದೇ ಪ್ರದೇಶದಲ್ಲಿ ಜಾಗ ಹೊಂದಿದ್ದ ಉದ್ಯಮಿ ಬಾಲಕೃಷ್ಣ ನಾಯಕ ಅವರು, ಟಿಎಂಎಸ್ ಹೆಸರಿಗೆ ನೋಂದಣಿಯಾಗಿದ್ದ ಸದರಿ ಜಾಗವನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಅವರ ಆಪ್ತ ವಲಯದಲ್ಲಿ ಬಾಲಕೃಷ್ಣ ನಾಯಕ ಗುರುತಿಸಿಕೊಂಡಿದ್ದರು ಎಂಬುದನ್ನೂ ಸಭೆಯಲ್ಲಿ ಉಲ್ಲೇಖಿಸಲಾಯಿತು.
ಟಿಎಂಎಸ್ ಸಂಸ್ಥೆಯ ಪ್ರಕಾರ, ಬಾಲಕೃಷ್ಣ ನಾಯಕ ಅವರು ಜಾಗವನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಸಚಿವ ಶಿವರಾಮ ಹೆಬ್ಬಾರ ಅವರ ಮೂಲಕವೂ ಪ್ರಯತ್ನ ನಡೆಸಿದ್ದರು. ಶಿವರಾಮ ಹೆಬ್ಬಾರ ಅವರು ತಮ್ಮ ಪ್ರಭಾವ ಬಳಸಿ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ, ಜಾಗವನ್ನು ಬಾಲಕೃಷ್ಣ ನಾಯಕ ಅವರಿಗೇ ಮಂಜೂರು ಮಾಡಿಸಲು ಪ್ರಯತ್ನಿಸಿದರು ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು.
ಈ ಬೆಳವಣಿಗೆಯನ್ನು ಗಮನಿಸಿದ ಟಿಎಂಎಸ್ ಆಡಳಿತ ಮಂಡಳಿ, ಸಂಸ್ಥೆಗೆ ಮಂಜೂರಾಗಿದ್ದ ಹಾಗೂ ಈಗಾಗಲೇ ತನ್ನ ಹೆಸರಿಗೆ ನೋಂದಾಯಿಸಿಕೊಂಡಿದ್ದ ಜಾಗವನ್ನು ಮತ್ತೊಬ್ಬರ ಪಾಲಾಗಲು ಬಿಡಬಾರದು ಎಂಬ ನಿಲುವು ತೆಗೆದುಕೊಂಡು ನ್ಯಾಯಾಲಯದ ಮೊರೆ ಹೋಯಿತು. ಜಾಗವನ್ನು ಬೇರೆಯವರಿಗೆ ನೀಡದಂತೆ ಕೋರಿ ಹೈಕೋರ್ಟ್ನಲ್ಲಿ ದಾವೆ ದಾಖಲಿಸಿದ್ದು, ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ.
ಇದೇ ವೇಳೆ, ಟಿಎಂಎಸ್ ಚುನಾವಣೆಯ ಮತ ಎಣಿಕೆಗೆ ಸಂಬಂಧಿಸಿದಂತೆ ನಡೆದ ಸುದೀರ್ಘ ಹೋರಾಟದ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದು ಕೆಲಕಾಲ ಆರೋಪ–ಪ್ರತ್ಯಾರೋಪಗಳು ನಡೆದವು.
ಇಡಗುಂದಿ ಸೊಸೈಟಿ ಅಧ್ಯಕ್ಷ ನಾರಾಯಣ ಭಟ್ಟ ಬಟ್ಲಗುಂಡಿ ಅವರು, ಟಿಎಂಎಸ್ ಸಂಸ್ಥೆಗೆ ದೀರ್ಘಕಾಲ ಆಡಳಿತ ಮಂಡಳಿ ಇಲ್ಲದೇ ಸದಸ್ಯರು ಅನುಭವಿಸಿದ ಕಷ್ಟಕ್ಕೆ ಇಡಗುಂದಿ, ದೇಹಳ್ಳಿ ಹಾಗೂ ಕಿರವತ್ತಿ ಸೊಸೈಟಿಗಳು ಕಾರಣ ಎಂಬ ರೀತಿಯಲ್ಲಿ ಸಂಸ್ಥೆಯ ಆಡಾವೆ ಪತ್ರಿಕೆಯಲ್ಲಿ ನಮೂದಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ನಾವು ನಿಯಮಾವಳಿಯಂತೆ, ಸದಸ್ಯರ ಹಿತದೃಷ್ಟಿಯಿಂದ ಹಾಗೂ ಸಂಸ್ಥೆಯ ಒಳಿತಿಗಾಗಿ ದಾವೆ ದಾಖಲಿಸಿ ಹೋರಾಡಿದ್ದೇವೆ. ಇದರಲ್ಲಿ ಯಾವುದೇ ದುರುದ್ದೇಶ ಅಥವಾ ಸ್ವಾರ್ಥ ಇಲ್ಲ. ಆದರೂ ನಮ್ಮ ಮೇಲೆ ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು.
ಈ ಹೋರಾಟಕ್ಕೆ ಸಂಬಂಧಿಸಿ ಟಿಎಂಎಸ್ ಸಂಸ್ಥೆಗೆ ರೂ.13 ಲಕ್ಷ ವೆಚ್ಚವಾಗಿದ್ದು, ಈ ವೆಚ್ಚವನ್ನು ಹೋರಾಟಕ್ಕೆ ಕಾರಣರಾದವರೇ ಭರಿಸಬೇಕು ಎಂದು ಸಭೆಯಲ್ಲಿ ಕೆಲವರು ಆಗ್ರಹಿಸಿದರು. ಅಂತಿಮವಾಗಿ ಸಂಸ್ಥೆಯ ಬೆಳವಣಿಗೆ ಹಾಗೂ ಸದಸ್ಯರ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯಬೇಕು. ಹಿಂದಿನ ಜಿದ್ದು, ಹಠ ಹಾಗೂ ವಿವಾದಗಳನ್ನು ಮುಂದುವರಿಸದೆ ಸಂಸ್ಥೆಯ ಒಳಿತಿನತ್ತ ಗಮನ ಹರಿಸಬೇಕು ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.
ಇದರೊಂದಿಗೆ, ಉತ್ತರಕನ್ನಡ ಜಿಲ್ಲೆಗೆ ಅನನ್ಯ ಕೊಡುಗೆ ನೀಡಿದ ದಿವಂಗತ ರಾಮಕೃಷ್ಣ ಹೆಗಡೆ ಅವರ ಪುತ್ಥಳಿಯನ್ನು ಸಂಸ್ಥೆಯ ಮುಂಭಾಗದಲ್ಲಿ ಸ್ಥಾಪಿಸಲಾಗುವುದು ಎಂಬ ವಿಚಾರವನ್ನೂ ಸಂಸ್ಥೆಯ ಅಧ್ಯಕ್ಷರು ತಿಳಿಸಿದರು.


