ಯಲ್ಲಾಪುರ: ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆಶ್ರಯದಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಮುಂದುವರಿಯದಂತೆ ಸಂಕಲ್ಪಿಸಿ ಹಾಗೂ ಎಲೆಚುಕ್ಕೆ ಸೇರಿದಂತೆ ರೋಗರುಜಿನ ಬಾಧೆಗಳ ನಿವಾರಣೆಗೆ ಪ್ರಾರ್ಥಿಸಿ ಸೆ.29, ಅಂಗಾರಕ ಸಂಕಷ್ಟಿಯಂದು ವಿಶೇಷ ಹರಕೆಯ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನದಿ ತಿರುವು ಯೋಜನೆಯು ಜಿಲ್ಲೆಯ ಜನರ ಬದುಕಿಗೆ ಮಾರಕವಾಗಿದ್ದು, ಅದನ್ನು ನಿಲ್ಲಿಸುವಂತೆ ಸಂಕಲ್ಪಿಸಿ ಈಗಾಗಲೇ 21 ಸಾವಿರ ಉಪನಿಷತ್ ಪಾರಾಯಣ ಮಾಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಸೆ.29ರಂದು ಅಥರ್ವಶೀರ್ಷ ಹವನ ನಡೆಸಲು ನಿಶ್ಚಯಿಸಲಾಗಿದೆ.
ಅಂದು ಮಧ್ಯಾಹ್ನ ಭಕ್ತರಿಗೆ ಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ಕಾರ್ಯಕ್ರಮವೂ ನಡೆಯಲಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವೇ. ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ತಿಳಿಸಿದ್ದಾರೆ.


