ಯಲ್ಲಾಪುರ: ಎಲೆಚುಕ್ಕೆ ರೋಗದ ಬಾಧೆಯಿಂದ ವರ್ಷದಿಂದ ವರ್ಷಕ್ಕೆ ಅಡಿಕೆ ಉತ್ಪಾದನೆ ಗಣನೀಯವಾಗಿ ಕುಸಿಯುತ್ತಿದ್ದು, ರೈತರು ಭವಿಷ್ಯದ ದೃಷ್ಟಿಯಿಂದ ಪರ್ಯಾಯ ಬೆಳೆಗಳತ್ತ ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಯತ್ತ ರೈತರು ಗಮನ ಹರಿಸಬೇಕು ಎಂದು ಎಲ್‌ಎಸ್‌ಎಂಪಿ ಸೊಸೈಟಿ ಅಧ್ಯಕ್ಷ ನಾಗರಾಜ್ ಕವಡಿಕೆರೆ ಹೇಳಿದರು.
ಪಟ್ಟಣದ ಎಲ್‌ಎಸ್‌ಎಂಪಿ ಸಭಾಭವನದಲ್ಲಿ ನಡೆದ ‘ಅಡಿಕೆ ಬೆಳೆಗೆ ಪರ್ಯಾಯವಾಗಿ ಕಾಫಿ ಬೆಳೆ’ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಡಿಕೆ ನಮ್ಮ ಭಾಗದ ರೈತರ ಜೀವನದ ಅವಿಭಾಜ್ಯ ಅಂಗವಾಗಿದ್ದು, ಜೀವನದ ಬಹುತೇಕ ಅಗತ್ಯಗಳಿಗೆ ಅಡಿಕೆ ಬೆಳೆಯನ್ನೇ ಅವಲಂಬಿಸಿಕೊಂಡು ಬಂದಿದ್ದಾರೆ. ಆದರೆ ಎಲೆಚುಕ್ಕೆ ರೋಗದಿಂದ ಅಡಿಕೆ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಹೊಸ ಅಡಿಕೆ ತೋಟಗಳ ನಿರ್ಮಾಣ ಮುಂದುವರಿದಿರುವುದು ಮುಂದಿನ ದಿನಗಳ ಅಪಾಯದ ಮುನ್ಸೂಚನೆಯಂತಿದೆ. ಹೀಗಾಗಿ ರೈತರು ಪರ್ಯಾಯ ಬೆಳೆಯತ್ತ ಮುಖ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಶಿರಸಿ ಭಾಗದ ರೈತರು ಈಗಾಗಲೇ ಒಂದು ಹೆಜ್ಜೆ ಮುಂದೆ ಹೋಗಿ ಕಾಫಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್‌ಎಸ್‌ಎಂಪಿ ಸಂಸ್ಥೆಯ ವತಿಯಿಂದ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸತೀಶ್ ಹೆಗಡೆ ಮಾತನಾಡಿ, ಪ್ರಸ್ತುತ ಅಡಿಕೆ ಬೆಳೆಯ ಸನ್ನಿವೇಶ, ಪರ್ಯಾಯ ಬೆಳೆಯ ಅನಿವಾರ್ಯತೆ ಹಾಗೂ ಭವಿಷ್ಯದಲ್ಲಿ ಪರ್ಯಾಯ ಬೆಳೆಗಳ ಮಹತ್ವದ ಕುರಿತು ವಿವರಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಟಿ.ಆರ್. ಹೆಗಡೆ, ಹಿರಿಯ ನಿರ್ದೇಶಕ ತಿಮ್ಮಣ್ಣ ಭಟ್ಟ ಘಟ್ಟಿ, ಮಹಾಬಲೇಶ್ವರ ಭಟ್ ಸೇರಿದಂತೆ ಸಂಸ್ಥೆಯ ಪ್ರಮುಖರು, ಸಿಬ್ಬಂದಿಗಳು ಹಾಗೂ ರೈತರು ಉಪಸ್ಥಿತರಿದ್ದರು.


