ಕಾರವಾರ: ನಗರದ ಶಿರವಾಡದ ಡಂಪಿಂಗ್ ಯಾರ್ಡ್ ಹಾಗೂ ಹೆದ್ದಾರಿ ಫ್ಲೈಓವರ್ ಕೆಳಗಿನ ಅವ್ಯವಸ್ಥೆ ಕಂಡು ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಗ್ಗೆ ಕಾರವಾರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಶಿರವಾಡದ ನಗರಸಭೆ ಡಂಪಿಂಗ್ ಯಾರ್ಡ್ನ ಅವೈಜ್ಞಾನಿಕ ಹಾಗೂ ಅಸ್ವಚ್ಛ ನಿರ್ವಹಣೆಯನ್ನು ಕಂಡು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಸಿ ಮತ್ತು ಒಣ ಕಸದ ವಿಲೇವಾರಿ ವಿಳಂಬವಾಗುತ್ತಿರುವುದು, ಚರಂಡಿಗಳ ಸಮರ್ಪಕ ನಿರ್ವಹಣೆ ಇಲ್ಲದಿರುವುದು ಹಾಗೂ ತ್ಯಾಜ್ಯದಿಂದ ಪರಿಸರ ಹಾಳಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಡಂಪಿಂಗ್ ಯಾರ್ಡ್ನಿಂದ ಹೊರಬರುವ ಕಲುಷಿತ ದ್ರವ ತ್ಯಾಜ್ಯ ನೇರವಾಗಿ ಭೂಮಿಯಲ್ಲಿ ಇಂಗುತ್ತಿರುವುದರಿಂದ ಸುತ್ತಮುತ್ತಲಿನ ಬಾವಿ ಹಾಗೂ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಇದೆ. ಸೊಳ್ಳೆ, ನೊಣಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳ ಅಪಾಯವೂ ಇದೆ ಎಂದು ಸ್ಥಳೀಯರು ಉಪ ಲೋಕಾಯುಕ್ತರ ಗಮನಕ್ಕೆ ತಂದರು.
ಈ ಗಂಭೀರ ಸಮಸ್ಯೆಯನ್ನು ಸ್ವಯಂಪ್ರೇರಿತವಾಗಿ (ಸುಮೊಟೊ) ಪ್ರಕರಣವಾಗಿ ದಾಖಲಿಸಿಕೊಳ್ಳುವುದಾಗಿ ತಿಳಿಸಿದ ಉಪ ಲೋಕಾಯುಕ್ತರು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ ವೈಜ್ಞಾನಿಕ ಪರಿಶೀಲನೆ ನಡೆಸುವಂತೆ ಸೂಚಿಸಿದರು.
ಸಮಿತಿಯಲ್ಲಿ ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಲೋಕೋಪಯೋಗಿ ಇಲಾಖೆ, ಜಿ.ಪಂ. ಸಿಇಒ ಹಾಗೂ ವೈದ್ಯಾಧಿಕಾರಿಗಳನ್ನು ಒಳಪಡಿಸುವಂತೆ ನಿರ್ದೇಶನ ನೀಡಿದರು. ಅಗತ್ಯವಿದ್ದರೆ ಜನವಸತಿ ಇಲ್ಲದ ಸೂಕ್ತ ಪ್ರದೇಶಕ್ಕೆ ತ್ಯಾಜ್ಯ ಘಟಕವನ್ನು ಸ್ಥಳಾಂತರಿಸುವ ಕುರಿತೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನಗರದ ಹೆದ್ದಾರಿ ಫ್ಲೈಓವರ್ ಕೆಳಗಿನ ಖಾಲಿ ಜಾಗದಲ್ಲಿ ಅನಧಿಕೃತ ವಾಹನ ಪಾರ್ಕಿಂಗ್ ಹಾಗೂ ಇತರ ಚಟುವಟಿಕೆಗಳಿಗೆ ಅವಕಾಶ ನೀಡಿರುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಲಿಖಿತ ಸ್ಪಷ್ಟನೆ ನೀಡುವಂತೆ ಸೂಚಿಸಿದ ಅವರು, ಪ್ರಕರಣ ದಾಖಲಿಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ತಿಳಿಸಿದರು. ಈ ವಿಷಯವನ್ನು ಕೇಂದ್ರ ಲೋಕಪಾಲ್ ಗಮನಕ್ಕೂ ತರುವುದಾಗಿ ಹೇಳಿದರು.
ಫ್ಲೈಓವರ್ ಕೆಳಗೆ ಅನುಮತಿ ಇಲ್ಲದೆ ನರ್ಸರಿ ವ್ಯಾಪಾರ ನಡೆಸುತ್ತಿದ್ದವರನ್ನೂ ವಿಚಾರಿಸಿದ ಅವರು, ಕೇವಲ ನೋಟಿಸ್ ಹಾಗೂ ದಂಡ ವಿಧಿಸುವುದರಿಂದ ಅಕ್ರಮ ಚಟುವಟಿಕೆಗಳು ನಿಲ್ಲುವುದಿಲ್ಲ. ಅಗತ್ಯವಿದ್ದಲ್ಲಿ ಕ್ರಿಮಿನಲ್ ದೂರು ದಾಖಲಿಸಿ ವಸ್ತುಗಳು ಹಾಗೂ ವಾಹನಗಳನ್ನು ಜಪ್ತಿ ಮಾಡುವಂತಹ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಫ್ಲೈಓವರ್ ಕೆಳಗೆ ವಾಹನಗಳ ನಿಲುಗಡೆ ತಡೆಯಲು ಗೇಟ್ ಅಳವಡಿಸಿ, ತೋಟಗಾರಿಕಾ ಇಲಾಖೆಯ ಮೂಲಕ ಉದ್ಯಾನ ಮಾದರಿಯಲ್ಲಿ ಸ್ಥಳವನ್ನು ಅಭಿವೃದ್ಧಿಪಡಿಸುವಂತೆ ನಿರ್ದೇಶಿಸಿದರು.
ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಸ್ವಾಯತ್ತತೆ ಹಾಗೂ ಅಧಿಕಾರ ನೀಡುವ ನಿಟ್ಟಿನಲ್ಲಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯಾದ್ಯಂತ ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 300ರಿಂದ 400 ಹುದ್ದೆಗಳು ಖಾಲಿಯಿದ್ದು, ಸಂಸ್ಥೆಯನ್ನು ಬಲಪಡಿಸಲು ಶೇ.50ರಷ್ಟು ನಿವೃತ್ತ ಸೇನಾಧಿಕಾರಿಗಳನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ., ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಕಾರವಾರ ಉಪವಿಭಾಗಾಧಿಕಾರಿ ರಮ್ಯಾ, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ನಗರಸಭೆ ಪೌರಾಯುಕ್ತ ಜಗದೀಶ್ ಹುಲಗಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


