Thursday, October 22, 2026
HomeLocal Newsದೂರುಗಳ ಬೆನ್ನತ್ತಿದ ಲೋಕಾಯುಕ್ತ; ಅಧಿಕಾರಿಗಳಿಗೆ ಚಾಟಿ

ದೂರುಗಳ ಬೆನ್ನತ್ತಿದ ಲೋಕಾಯುಕ್ತ; ಅಧಿಕಾರಿಗಳಿಗೆ ಚಾಟಿ

ಕಾರವಾರ: ವಿವಿಧ ಇಲಾಖೆಗಳ ವಿರುದ್ಧ ಸಾರ್ವಜನಿಕರು ಸಲ್ಲಿಸಿದ್ದ ದೂರುಗಳು ಹಾಗೂ ಬಾಕಿ ಪ್ರಕರಣಗಳ ಕುರಿತು ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಚಾರಣೆ ನಡೆಸಿ, ಅರ್ಹ ಪ್ರಕರಣಗಳಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು, ದೂರುದಾರರು ಹಾಗೂ ಎದುರುದಾರರ ಸಭೆಯಲ್ಲಿ ಒಟ್ಟು 80 ಪ್ರಕರಣಗಳನ್ನು ವಿಚಾರಣೆ ನಡೆಸಿದರು. ದೂರುದಾರರು ತಮ್ಮ ಅಹವಾಲು ಹಾಗೂ ದಾಖಲೆಗಳನ್ನು ನೇರವಾಗಿ ಮಂಡಿಸಲು ಅವಕಾಶ ಕಲ್ಪಿಸಿದ ಅವರು, ಎದುರುದಾರರಿಗೂ ತಮ್ಮ ನಿಲುವು ಮತ್ತು ದಾಖಲೆಗಳನ್ನು ಸಲ್ಲಿಸಲು ಸಮಾನ ಅವಕಾಶ ನೀಡಿದರು.

ದೂರುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಪ್ರಕರಣಗಳ ಸ್ಥಿತಿ, ಕೈಗೊಂಡ ಕ್ರಮ ಹಾಗೂ ಬಾಕಿ ಉಳಿದಿರುವುದಕ್ಕೆ ಕಾರಣಗಳನ್ನು ಪಡೆದ ಅವರು, ವಿಚಾರಣೆಗೆ ಗೈರುಹಾಜರಾಗಿದ್ದ ದೂರುದಾರರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ದೂರುಗಳ ವಿಲೇವಾರಿ ಕುರಿತು ಮಾಹಿತಿ ಪಡೆದುಕೊಂಡರು. ಅಧಿಕಾರಿಗಳು ಸಮಸ್ಯೆ ಪರಿಹರಿಸಿರುವುದಾಗಿ ನೀಡಿದ ಮಾಹಿತಿಯನ್ನು ಫಲಾನುಭವಿಗಳನ್ನು ಸಂಪರ್ಕಿಸುವ ಮೂಲಕ ಖಚಿತಪಡಿಸಿಕೊಂಡರು.

ಕುಮಟಾ ತಾಲೂಕಿನ ಹಳಕಾರ ಗ್ರಾಮದ ಗುನಗನಕೊಪ್ಪದಲ್ಲಿ ಐದು ಮನೆಗಳಿಗೆ ನೀರು ಪೂರೈಕೆಯಾಗದಿರುವ ದೂರಿನ ಬಗ್ಗೆ 15 ದಿನಗಳೊಳಗೆ ಸಮಸ್ಯೆ ಬಗೆಹರಿಸುವಂತೆ ಗ್ರಾಮ ಪಂಚಾಯಿತಿ ಪಿಡಿಒಗೆ ಸೂಚಿಸಿದರು. ನಾಲ್ಕು ವರ್ಷಗಳಿಂದ ವೇತನ ಬಾಕಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದ ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿಯ ಬಾಕಿ ವೇತನದ ದಾಖಲೆಗಳನ್ನು ಪರಿಶೀಲಿಸಿ ಶೀಘ್ರ ಪಾವತಿಸುವಂತೆ ಡಿಎಚ್‌ಒಗೆ ನಿರ್ದೇಶನ ನೀಡಿದರು.

ಗೋಕರ್ಣ ರೈಲ್ವೆ ನಿಲ್ದಾಣದಲ್ಲಿ ಅನಧಿಕೃತ ಬೈಕ್ ಬಾಡಿಗೆ ವ್ಯವಹಾರ ನಡೆಸುತ್ತಿರುವ ದೂರಿನ ಕುರಿತು ಈಗಾಗಲೇ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಬೈಕ್ ರೆಂಟ್ ನಡೆಯುತ್ತಿರುವುದು ಕಂಡುಬಂದರೆ ಪೊಲೀಸರಿಗೆ ದೂರು ನೀಡುವಂತೆ ದೂರುದಾರರಿಗೆ ತಿಳಿಸಿದರು.

ಯಲ್ಲಾಪುರ ಹಾಗೂ ಮುಂಡಗೋಡ ಬಸ್ ನಿಲ್ದಾಣಗಳ ಕುರಿತ ದೂರುಗಳನ್ನು ಇತ್ಯರ್ಥಪಡಿಸಿರುವುದಾಗಿ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಸ್ಥಳ ಪರಿಶೀಲನೆ ನಡೆಸಿ ಖಚಿತಪಡಿಸಿಕೊಂಡು ವರದಿ ನೀಡುವಂತೆ ಲೋಕಾಯುಕ್ತ ಡಿವೈಎಸ್ಪಿಗೆ ಸೂಚಿಸಿದರು. ಮುರ್ಡೇಶ್ವರದ ಹೋಟೆಲ್‌ವೊಂದರ ಜಂಟಿ ಖಾತೆಯ ಪರವಾನಗಿ ನವೀಕರಣ ಹಾಗೂ ತೆರಿಗೆ ಪಾವತಿ ಕುರಿತ ದೂರಿನ ಬಗ್ಗೆ ಲೋಕಾಯುಕ್ತ ಪೊಲೀಸರಿಂದ ಸಮಗ್ರ ತನಿಖೆ ನಡೆಸುವಂತೆ ನಿರ್ದೇಶಿಸಿದರು.

ವಿಚಾರಣೆಯಲ್ಲಿ ಕುಮಟಾ ತಾಲೂಕಿನ 10, ಮುಂಡಗೋಡ 4, ಶಿರಸಿ 7, ಯಲ್ಲಾಪುರ 7, ಹಳಿಯಾಳ 3, ದಾಂಡೇಲಿ 2, ಭಟ್ಕಳ 11, ಹೊನ್ನಾವರ 5, ಅಂಕೋಲಾ 6 ಹಾಗೂ ಕಾರವಾರ ತಾಲೂಕಿನ 27 ದೂರುಗಳನ್ನು ವಿಚಾರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ., ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ದೂರುದಾರರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share