ಮುಂಡಗೋಡ: ಕಾರವಾರದಲ್ಲಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗವಹಿಸಿ ‘ಟುಡೇ ಐ ಆಮ್ ಫ್ರೀ ಬರ್ಡ್’ ಎಂದು ಹೇಳಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ತಾವು ಬಿಜೆಪಿ ಚಿಹ್ನೆಯಡಿ ಗೆದ್ದ ಶಾಸಕ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸಂತೋಷ ತಳವಾರ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಈಗಾಗಲೇ ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಿದೆ. ಪಕ್ಷದಿಂದ ಉಚ್ಚಾನೆಯಾದ ಬಳಿಕ ತಾವು ‘ಫ್ರೀ ಬರ್ಡ್’ ಆಗಿದ್ದೇನೆ ಎನ್ನುವುದಾದರೆ, ಬಿಜೆಪಿ ಚಿಹ್ನೆಯಡಿ ಗೆದ್ದಿರುವ ಶಾಸಕ ಸ್ಥಾನವನ್ನು ಮುಂದುವರಿಸುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಸೇರುವವರನ್ನು ‘ವಾಷಿಂಗ್ ಮಷಿನ್’ನಲ್ಲಿ ಹಾಕಿ ಕ್ಲೀನ್ ಮಾಡಲಾಗುತ್ತದೆ, ತಮ್ಮನ್ನೂ ವಾಷಿಂಗ್ ಮಷಿನ್ನಲ್ಲಿ ಹಾಕಿದ್ದರು ಎಂಬ ಹೆಬ್ಬಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ತಳವಾರ, ಅಕ್ರಮ ಹಣಕಾಸು ವ್ಯವಹಾರಗಳ ಕುರಿತು ತನಿಖಾ ಸಂಸ್ಥೆಗಳು ತನಿಖೆ ನಡೆಸುವುದು ತನಿಖಾ ಪ್ರಕ್ರಿಯೆಯ ಭಾಗವಾಗಿದೆ. ಇಂತಹ ವಿಷಯಗಳನ್ನು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಮಾತ್ರ ಸೀಮಿತಗೊಳಿಸಬಾರದು ಎಂದಿದ್ದಾರೆ.
ಹೆಬ್ಬಾರ್ ಅವರನ್ನು ಮಾಜಿ ಶಾಸಕ ವಿ.ಎಸ್. ಪಾಟೀಲ ‘ಎಂಆರ್ಪಿ’ (Member of Ruling Party) ಎಂದು ಕರೆದಿರುವುದು, ಮುಂದಿನ ದಿನಗಳಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಅವರ ರಾಜಕೀಯ ನಿಲುವಿನ ಕುರಿತು ವ್ಯಕ್ತವಾಗಿರುವ ವ್ಯಂಗ್ಯವಾಗಿದೆ. ಕಾಂಗ್ರೆಸ್ನೊಳಗಿನ ಟಿಕೆಟ್ ವಿಚಾರದ ಬಗ್ಗೆ ಉಂಟಾಗಿರುವ ಗೊಂದಲದಿಂದ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಬ್ಬಾರ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ನಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹೆಬ್ಬಾರ್ ಇದ್ದಾರೆ ಎಂಬುದು ಅವರ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ ಎಂದು ಸಂತೋಷ ತಳವಾರ ಟೀಕಿಸಿದ್ದಾರೆ.
ಹೆಬ್ಬಾರ್ ಅವರು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸುವುದರ ಜೊತೆಗೆ, ಬಿಜೆಪಿ ಚಿಹ್ನೆಯಡಿ ಗೆದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರ ಮುಂದೆ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


