ಶಿರಸಿ: ಒಂದು ವರ್ಷದ ಹಿಂದಿನ ಆ ದುರಂತದ ನೋವು ಕುಟುಂಬವನ್ನು ಇನ್ನೂ ಕಾಡುತ್ತಿದೆ. ಹೆತ್ತವರ ಕಣ್ಣೆದುರೇ ಬೆಳೆಯುತ್ತಿದ್ದ ಮಗಳು ಅನಿರೀಕ್ಷಿತ ಸಿಲಿಂಡರ್ ಸ್ಫೋಟಕ್ಕೆ ಬಲಿಯಾಗಿದ್ದಳು. ಇದೀಗ ಆ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ರೂ.8 ಲಕ್ಷ ಆರ್ಥಿಕ ನೆರವು ದೊರೆತಿದ್ದು, ಪರಿಹಾರದ ಅಧಿಕೃತ ದಾಖಲೆಗಳನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮೃತಳ ಪೋಷಕರಿಗೆ ಹಸ್ತಾಂತರಿಸಿದರು.
2025ರ ಸೆಪ್ಟೆಂಬರ್ 23ರಂದು ಶಿರಸಿ ತಾಲೂಕಿನ ಇಟ್ಗುಳಿ ಗ್ರಾಮದ ಮುರ್ಕಿ ಕೊಡ್ಲುವಿನಲ್ಲಿ ನಡೆದ ಸಿಲಿಂಡರ್ ಸ್ಫೋಟ ದುರಂತದಲ್ಲಿ ಕುಮಾರಿ ರಂಜಿತಾ ನಾಗಪ್ಪ ದೇವಾಡಿಗ ಅಕಾಲಿಕವಾಗಿ ಮೃತಪಟ್ಟಿದ್ದರು. ಘಟನೆ ಬಳಿಕ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ನೆರವು ದೊರಕಿಸುವ ನಿಟ್ಟಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.
ದುರಂತ ಸಂಭವಿಸಿದ ತಕ್ಷಣವೇ ಸಂಸದರು ಮೃತಳ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಬಳಿಕ ಭಾರತ್ ಗ್ಯಾಸ್ ವಿತರಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕುಟುಂಬಕ್ಕೆ ಶೀಘ್ರ ಆರ್ಥಿಕ ನೆರವು ದೊರಕಿಸಿಕೊಡುವಂತೆ ಸೂಚಿಸಿದ್ದರು.
ಅದರಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮೂಲಕ ರೂ.8 ಲಕ್ಷ ಪರಿಹಾರ ಧನ ಬಿಡುಗಡೆಯಾಗಿದ್ದು, ಈಗಾಗಲೇ ಮೃತಳ ಪೋಷಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಿದ್ದು, ಈ ಕುರಿತ ಅಧಿಕೃತ ದಾಖಲೆಗಳನ್ನು ಸಂಸದರು ಗುರುವಾರ ಸಂಸದರ ಕಾರ್ಯಾಲಯದಲ್ಲಿ ಪೋಷಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹೆತ್ತವರ ಕಣ್ಣೆದುರೇ ಬೆಳೆಯುತ್ತಿದ್ದ ಮುಗ್ಧ ಮಗಳು ದುರ್ಘಟನೆಯಲ್ಲಿ ಅಕಾಲಿಕವಾಗಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದರು.
ಮಗಳನ್ನು ಕಳೆದುಕೊಂಡ ಪೋಷಕರ ದುಃಖವನ್ನು ಯಾವುದೇ ಮಾತುಗಳಿಂದಲೂ ನೀಗಿಸಲು ಸಾಧ್ಯವಿಲ್ಲ. ಕಷ್ಟದಲ್ಲಿರುವ ನಾಗರಿಕರಿಗೆ ಕೇಂದ್ರ ಸರ್ಕಾರದ ನೆರವು ಕೇವಲ ಅನುಕಂಪದ ಮಾತುಗಳಿಗೆ ಸೀಮಿತವಾಗದೆ, ಕಾರ್ಯರೂಪದಲ್ಲಿಯೂ ದೊರೆಯುತ್ತದೆ ಎಂಬುದಕ್ಕೆ ಈ ಪರಿಹಾರ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಳೆದುಕೊಂಡ ಮಗಳನ್ನು ಮರಳಿ ತರಲು ಸಾಧ್ಯವಿಲ್ಲವಾದರೂ, ದಿಕ್ಕು ತೋಚದಂತಾಗಿದ್ದ ಕುಟುಂಬದ ಮುಂದಿನ ಬದುಕಿಗೆ ಕೇಂದ್ರ ಸರ್ಕಾರದ ಈ ಆರ್ಥಿಕ ನೆರವು ಆಸರೆಯಾಗಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತ್ ಗ್ಯಾಸ್ ಏಜೆನ್ಸಿಯ ರಾಘವೇಂದ್ರ ಕಾಮತ್, ಪ್ರಮುಖರಾದ ರವಿ ಹೆಗಡೆ ಹಳದೋಟ ಸೇರಿದಂತೆ ಇತರರು ಉಪಸ್ಥಿತರಿದ್ದರು.


