Friday, October 23, 2026
HomeLocal Newsದುಬಾರಿ ಯಂತ್ರಗಳು ಮೂಲೆಗುಂಪು; ಕ್ರಿಮ್ಸ್ ಅವ್ಯವಸ್ಥೆಗೆ ಲೋಕಾಯುಕ್ತರ ಕೆಂಗಣ್ಣು

ದುಬಾರಿ ಯಂತ್ರಗಳು ಮೂಲೆಗುಂಪು; ಕ್ರಿಮ್ಸ್ ಅವ್ಯವಸ್ಥೆಗೆ ಲೋಕಾಯುಕ್ತರ ಕೆಂಗಣ್ಣು

ಕಾರವಾರ: ರೋಗಿಗಳ ಚಿಕಿತ್ಸೆಗೆಂದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸೌಲಭ್ಯಗಳು, ದುಬಾರಿ ವೈದ್ಯಕೀಯ ಯಂತ್ರೋಪಕರಣಗಳು, ವೈದ್ಯರು-ಸಿಬ್ಬಂದಿ ಇದ್ದರೂ ವ್ಯವಸ್ಥೆ ಮಾತ್ರ ಸರಿದಾರಿಗೆ ಬರದಿದ್ದರೆ ಹೇಗೆ? ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್)ಗೆ ದಿಢೀರ್ ಭೇಟಿ ನೀಡಿದ ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿಗೆ ಆಸ್ಪತ್ರೆಯಲ್ಲಿ ಕಂಡುಬಂದ ಹಲವು ಲೋಪದೋಷಗಳು ಇದೇ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಪರಿಶೀಲನೆ ಬಳಿಕ ಕ್ರಿಮ್ಸ್‌ನಲ್ಲಿನ ಅವ್ಯವಸ್ಥೆಗಳ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಗುರುವಾರ ಕ್ರಿಮ್ಸ್ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ ಉಪಲೋಕಾಯುಕ್ತರು ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಈ ವೇಳೆ ಕಂಡುಬಂದ ಹಲವಾರು ಲೋಪದೋಷಗಳು ಹಾಗೂ ಸಿಬ್ಬಂದಿಯ ಕರ್ತವ್ಯ ಲೋಪದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರೋಗಿಗಳ ಅನುಕೂಲಕ್ಕಾಗಿ ಆಸ್ಪತ್ರೆಗೆ ಸಿಟಿ ಸ್ಕ್ಯಾನ್, ಎಂಆರ್‌ಐ ಹಾಗೂ ಮ್ಯಾಮೋಗ್ರಫಿ ಸೇರಿದಂತೆ ದುಬಾರಿ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದ್ದರೂ, ಅವುಗಳನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಹಾಗೂ ಕೆಲವು ಉಪಕರಣಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಪರಿಶೀಲನೆ ವೇಳೆ ಕಂಡುಬಂದಿದೆ. ದುಬಾರಿ ಯಂತ್ರೋಪಕರಣಗಳು ವ್ಯರ್ಥವಾಗದಂತೆ ತಕ್ಷಣ ಅವುಗಳನ್ನು ಕಾರ್ಯಗತಗೊಳಿಸಿ ರೋಗಿಗಳಿಗೆ ಅಗತ್ಯ ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸಿದರು.

ಆಸ್ಪತ್ರೆಯ ಸುತ್ತಮುತ್ತಲಿನ ನೈರ್ಮಲ್ಯದ ಬಗ್ಗೆಯೂ ಉಪಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಒಳಚರಂಡಿ ಹಾಗೂ ಕಲುಷಿತ ನೀರು ಹೊರಹರಿದು ಸಮುದ್ರ ಸೇರುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, ಆಸ್ಪತ್ರೆಯ ಎಸ್‌ಟಿಪಿ ವ್ಯವಸ್ಥೆಯ ಕಾರ್ಯನಿರ್ವಹಣೆಯ ಬಗ್ಗೆಯೂ ಪರಿಶೀಲನೆ ನಡೆಸಿದರು.

ಆಸ್ಪತ್ರೆ ಕಟ್ಟಡದಲ್ಲಿನ ಟೈಲ್ಸ್ ಅಳವಡಿಕೆ ಕಳಪೆಯಾಗಿರುವುದು ಹಾಗೂ ಗಾಳಿ-ಬೆಳಕಿನ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದನ್ನು ಗಮನಿಸಿದ ಅವರು, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ವರದಿಯನ್ನು ತರಿಸಿಕೊಳ್ಳುವುದಾಗಿ ತಿಳಿಸಿದರು.

ಇನ್ನು ವೈದ್ಯಕೀಯ ಯಂತ್ರೋಪಕರಣಗಳ ನಿರ್ವಹಣೆಗೆ ಅಗತ್ಯವಿರುವ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆಯಿರುವುದನ್ನು ಗಮನಿಸಿದ ಉಪಲೋಕಾಯುಕ್ತರು, ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಆಂಬ್ಯುಲೆನ್ಸ್‌ಗಳ ಕೊರತೆಯಿರುವ ಹಿನ್ನೆಲೆಯಲ್ಲಿ ಹೊಸ ಆಂಬ್ಯುಲೆನ್ಸ್‌ಗಳ ಅಗತ್ಯತೆಯ ಕುರಿತು ವರದಿ ನೀಡುವಂತೆ ಸೂಚಿಸಿದರು.

ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ಹಾಜರಾತಿ ರಿಜಿಸ್ಟರ್ ಹಾಗೂ ಕ್ಯಾಶ್ ಡಿಕ್ಲೇರೇಶನ್‌ಗಳನ್ನು ಪರಿಶೀಲಿಸಲಾಯಿತು. ನಿಯಮ ಮೀರಿ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದರೆ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಇಲಾಖಾ ಹಂತದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ., ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಎಸ್ಪಿ ದೀಪನ್ ಎಂ.ಎನ್., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್, ಡಿವೈಎಸ್ಪಿ ಧನ್ಯಾ ನಾಯ್ಕ ಹಾಗೂ ಕ್ರಿಮ್ಸ್‌ನ ವೈದ್ಯರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share