Thursday, October 22, 2026
HomeNationalʻಮದುವೆ? ವಸಿ ತಡೀರಿ!ʼ; ಬದಲಾಗುತ್ತಿದೆ ಭಾರತ!

ʻಮದುವೆ? ವಸಿ ತಡೀರಿ!ʼ; ಬದಲಾಗುತ್ತಿದೆ ಭಾರತ!

ನವದೆಹಲಿ: “ಮದುವೆ ಯಾವಾಗ?” ಭಾರತೀಯ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಒಂದು ಹಂತ ತಲುಪಿದರೆ ಕೇಳಿಬರುವ ಸಾಮಾನ್ಯ ಪ್ರಶ್ನೆ. ಭಾರತದಲ್ಲಿ ಅವಿವಾಹಿತ ಮಹಿಳೆಯರ ಪ್ರಮಾಣ ಒಂದು ದಶಕದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಕುತೂಹಲಕಾರಿ ಅಂಶವೆಂದರೆ, ಇದರ ಹಿಂದೆ ಕೇವಲ ಉದ್ಯೋಗ ಅಥವಾ ವೃತ್ತಿಜೀವನದ ಕನಸು ಮಾತ್ರ ಇಲ್ಲ. ಯುವತಿಯರು ಮದುವೆಯನ್ನು ನೋಡುವ ರೀತಿಯೇ ನಿಧಾನವಾಗಿ ಬದಲಾಗುತ್ತಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಮಾಹಿತಿಯ ಪ್ರಕಾರ, 2011ರಲ್ಲಿ ಭಾರತದಲ್ಲಿನ ಅವಿವಾಹಿತ ಯುವತಿಯರ ಪ್ರಮಾಣ ಶೇ.13.5ರಷ್ಟಿತ್ತು. 2021ರ ವೇಳೆಗೆ ಅದು ಶೇ.19.9ಕ್ಕೆ ಏರಿದೆ. ಇದರರ್ಥ ಈ ಎಲ್ಲರೂ ಮದುವೆಯಾಗಲು ನಿರಾಕರಿಸಿದ್ದಾರೆ ಎಂದಲ್ಲ. ಕೆಲವರ ಮದುವೆ ತಡವಾಗಿರಬಹುದು. ಕೆಲವರು ಇನ್ನೂ ಸಂಗಾತಿಯನ್ನು ಹುಡುಕುತ್ತಿರಬಹುದು. ಮತ್ತಷ್ಟು ಮಂದಿ ಮದುವೆಯನ್ನೇ ತಮ್ಮ ಬದುಕಿನ ಅನಿವಾರ್ಯ ಹಂತವೆಂದು ಪರಿಗಣಿಸದಿರಬಹುದು.

ಆದರೆ, ಮದುವೆಯ ವಯಸ್ಸು, ಸಮಯ ಮತ್ತು ಆದ್ಯತೆಗಳ ಹಳೆಯ ಲೆಕ್ಕಾಚಾರದಲ್ಲಿ ಬದಲಾವಣೆ ಶುರುವಾಗಿದೆ.

ಕೇಂದ್ರ ಸರ್ಕಾರದ AISHE 2021-22ರ ಅಂಕಿ-ಅಂಶದ ಪ್ರಕಾರ, ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿ 2014-15ರಲ್ಲಿ 1.57 ಕೋಟಿಯಷ್ಟಿದ್ದರೆ, 2021-22ರಲ್ಲಿ 2.07 ಕೋಟಿಗೆ ಏರಿದೆ. ಮಹಿಳೆಯರ ಒಟ್ಟು ದಾಖಲಾತಿ ಪ್ರಮಾಣವೂ ಶೇ.22.9ರಿಂದ ಶೇ.28.5ಕ್ಕೆ ಹೆಚ್ಚಾಗಿದೆ.

ಅಂದರೆ, ಮದುವೆಗೂ ಮುನ್ನವೇ ತಮ್ಮ ಕಾಲ ಮೇಲೆ ನಿಲ್ಲುವ ಅವಕಾಶ ಮಹಿಳೆಯರಿಗೆ ಹೆಚ್ಚಾಗಿದೆ. ಹೀಗಾಗಿ “ಮದುವೆಯಾದರೆ ಮಾತ್ರ ಬದುಕು ಭದ್ರ” ಎನ್ನುವ ಹಳೆಯ ಲೆಕ್ಕಾಚಾರ ಎಲ್ಲರಿಗೂ ಅನ್ವಯಿಸುವುದಿಲ್ಲ.

ಭಾರತದ 2019ರ Time Use Survey ಹೇಳುವುದು ಬೇರೆ ಕಥೆ. ಮಹಿಳೆಯರು ಮನೆಯ ಸದಸ್ಯರಿಗಾಗಿ ದಿನಕ್ಕೆ ಸರಾಸರಿ 299 ನಿಮಿಷ ವೇತನರಹಿತ ಗೃಹಕಾರ್ಯದಲ್ಲಿ ಕಳೆಯುತ್ತಿದ್ದರೆ, ಪುರುಷರ ಸಮಯ 97 ನಿಮಿಷ. ಆರೈಕೆ ಕೆಲಸದಲ್ಲೂ ಮಹಿಳೆಯರ ಪಾಲು 134 ನಿಮಿಷ, ಪುರುಷರದು 76 ನಿಮಿಷ.

ಅಡುಗೆ, ಮನೆ ಸ್ವಚ್ಛತೆ, ಮಕ್ಕಳ ಆರೈಕೆ, ಮನೆಯ ವ್ಯವಸ್ಥೆ, ಹಿರಿಯರ ಜವಾಬ್ದಾರಿ ಇವೆಲ್ಲವೂ ಮದುವೆಯ ನಂತರವೂ ತಮ್ಮ ಮೇಲೆಯೇ ಹೆಚ್ಚಾಗಿ ಬೀಳಬಹುದು ಎಂಬ ಅನುಭವ ಅಥವಾ ಆತಂಕ ಕೆಲವು ಮಹಿಳೆಯರನ್ನು ಮದುವೆಯ ಬಗ್ಗೆ ಮತ್ತಷ್ಟು ಯೋಚಿಸುವಂತೆ ಮಾಡುತ್ತಿದೆ.

ಸಂಗಾತಿಯ ಆಯ್ಕೆಯಲ್ಲೂ ಇದೇ ಬದಲಾವಣೆ ಕಾಣುತ್ತಿದೆ. 2024ರ ಡೇಟಿಂಗ್ ಸೈಟ್‌ನ ವರದಿಯೊಂದರಲ್ಲಿ ಶೇ.64ರಷ್ಟು ಮಹಿಳಾ ಬಳಕೆದಾರರು ತಮಗೆ ಸಂಬಂಧದಲ್ಲಿ ಏನು ಬೇಕು ಎಂಬುದರ ಬಗ್ಗೆ ಹೆಚ್ಚು ಸ್ಪಷ್ಟತೆ ಬಂದಿದೆ ಮತ್ತು ಹೊಂದಾಣಿಕೆ ಇಲ್ಲದ ಸಂಬಂಧಕ್ಕೆ ಒಪ್ಪಿಕೊಳ್ಳುವ ಮನಸ್ಥಿತಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

NFHS ಅಂಕಿ-ಅಂಶ ಆಧರಿಸಿದ ಅಧ್ಯಯನವೊಂದರ ಪ್ರಕಾರ, 20ರಿಂದ 49 ವರ್ಷದ ಮಹಿಳೆಯರ ಮೊದಲ ಮದುವೆಯ ಮಧ್ಯಮ ವಯಸ್ಸು 1992-93ರಲ್ಲಿ 16.2 ವರ್ಷಗಳಿದ್ದರೆ, 2019-21ರಲ್ಲಿ 19.2 ವರ್ಷಗಳಿಗೆ ಏರಿದೆ. 18 ವರ್ಷ ತುಂಬುವ ಮೊದಲೇ ಮದುವೆಯಾಗಿದ್ದ 20ರಿಂದ 24 ವರ್ಷದ ಮಹಿಳೆಯರ ಪ್ರಮಾಣವೂ ಸುಮಾರು ಶೇ.66ರಿಂದ ಶೇ.23.2ಕ್ಕೆ ಇಳಿದಿದೆ.

ಕೆಲವರು ಮದುವೆಯಾಗದೇ ಸಂತೃಪ್ತರಾಗಿದ್ದಾರೆ. ಕೆಲವರು ಮದುವೆಗಿಂತ ದೀರ್ಘಕಾಲದ ಸಂಬಂಧವನ್ನು ಬಯಸುತ್ತಾರೆ. ಕೆಲವರು ಮದುವೆಯಾಗಲು ಇಚ್ಛಿಸುತ್ತಾರೆ, ಆದರೆ ತಮಗೆ ಹೊಂದುವ ಸಂಗಾತಿಗಾಗಿ ಕಾಯಲು ಸಿದ್ಧರಾಗಿದ್ದಾರೆ. ಇನ್ನೂ ಕೆಲವರು ಮಕ್ಕಳ ಬಗ್ಗೆ ತಮ್ಮದೇ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತಾರೆ.

ಹೀಗಾಗಿ, ಮದುವೆಯಾಗದಿರುವುದು ಪ್ರತಿಯೊಬ್ಬರಿಗೂ ಒಂದೇ ಕಾರಣದ ನಿರ್ಧಾರವಲ್ಲ. ಆದರೆ ಕೆಲವು ಮಹಿಳೆಯರಿಗೆ ಅದು ತಮ್ಮದೇ ರೀತಿಯಲ್ಲಿ ಬದುಕು ಮುಂದುವರಿಸುವ ಆಯ್ಕೆಯೂ ಆಗುತ್ತಿದೆ. ಭಾರತ ಬದಲಾಗುತ್ತಿದೆ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share