ಕಾರವಾರ: ಬದುಕಿನ ಕೊನೆಯ ವಿಧಿವಿಧಾನಕ್ಕೂ ಸೂಕ್ತ ವ್ಯವಸ್ಥೆ ಇಲ್ಲದ ಸ್ಥಿತಿ ಕಡವಾಡದ ಸಾರ್ವಜನಿಕ ಸ್ಮಶಾನದಲ್ಲಿ ನಿರ್ಮಾಣವಾಗಿದೆ. ಶವ ಸಂಸ್ಕಾರ ನಡೆಸುವ ಸ್ಥಳದಲ್ಲಿದ್ದ ಕಬ್ಬಿಣದ ಕಂಬಗಳು ಹಾಗೂ ಸರಳುಗಳು ತುಕ್ಕು ಹಿಡಿದು ಮುರಿದು ಬಿದ್ದಿದ್ದು, ಅಂತ್ಯಸಂಸ್ಕಾರಕ್ಕೆ ಬರುವ ಕುಟುಂಬಸ್ಥರು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ.
ಸ್ಮಶಾನದ ಚಿತಾಗಾರದಲ್ಲಿ ಕಬ್ಬಿಣದ ಕಂಬಗಳ ವ್ಯವಸ್ಥೆ ಹಾಳಾಗಿರುವುದರಿಂದ ಶವ ಸಂಸ್ಕಾರದ ವೇಳೆ ಕಟ್ಟಿಗೆಗಳನ್ನು ಜೋಡಿಸಲು ದೊಡ್ಡ ಕಲ್ಲುಗಳನ್ನು ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಮೃತಪಟ್ಟ ವ್ಯಕ್ತಿಯ ಅಂತಿಮ ವಿಧಿವಿಧಾನವನ್ನೂ ಗೌರವಯುತವಾಗಿ ನೆರವೇರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಆರೋಪಿಸಿದ್ದಾರೆ. ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಅವರು ದೂರಿದ್ದಾರೆ.
ಇದರ ನಡುವೆ ಸ್ಮಶಾನದ ದುರಸ್ತಿ ಕಾರ್ಯಕ್ಕೆ ಸಾರ್ವಜನಿಕರಿಂದ ಮನೆಮನೆಗೆ ತೆರಳಿ ಹಣ ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಜನರಿಂದ ಹಣ ಸಂಗ್ರಹಿಸಿ ಚಿತಾಗಾರದ ಕಬ್ಬಿಣದ ಕಂಬ ಹಾಗೂ ಸರಳುಗಳ ವ್ಯವಸ್ಥೆ ಮಾಡುವುದು ಸರಿಯಾದ ಕ್ರಮವಲ್ಲ. ಈ ರೀತಿಯ ಯಾವುದೇ ಪ್ರಯತ್ನಕ್ಕೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ರಾಜಾ ನಾಯ್ಕ ಆಗ್ರಹಿಸಿದ್ದಾರೆ.
ಕಡವಾಡದ ಸ್ಮಶಾನಕ್ಕೆ ಇನ್ನೊಂದು ಸಮಸ್ಯೆಯೂ ಸೇರಿಕೊಂಡಿದೆ. ಚಿತಾಗಾರಕ್ಕೆ ಸೂಕ್ತ ಮೇಲ್ಛಾವಣಿ ಇಲ್ಲದಿರುವುದರಿಂದ ಮಳೆ ಸೇರಿದಂತೆ ಹವಾಮಾನ ವೈಪರೀತ್ಯದ ಸಂದರ್ಭಗಳಲ್ಲಿ ಅಂತ್ಯಸಂಸ್ಕಾರ ನಡೆಸುವುದು ಮತ್ತಷ್ಟು ಕಷ್ಟವಾಗುತ್ತಿದೆ. ನೂತನ ಚಿತಾಗಾರ ನಿರ್ಮಾಣಕ್ಕೆ ಕೈಗೊಂಡಿದ್ದ ಕಾಮಗಾರಿಯೂ ಅರ್ಧದಲ್ಲೇ ನಿಂತಿದ್ದು, ಪೂರ್ಣಗೊಳ್ಳದೆ ಉಳಿದಿದೆ.
ಜನರ ಮೂಲಭೂತ ಅಗತ್ಯಕ್ಕೆ ಸಂಬಂಧಿಸಿದ ಇಂತಹ ಸ್ಥಳದ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಬಾರದು. ಮೃತರ ಅಂತ್ಯಸಂಸ್ಕಾರಕ್ಕೆ ಗೌರವಯುತ ಹಾಗೂ ಸುರಕ್ಷಿತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ, ಹಾಳಾಗಿರುವ ವ್ಯವಸ್ಥೆ ದುರಸ್ತಿ ಮಾಡುವುದರ ಜತೆಗೆ ಅರ್ಧಕ್ಕೆ ನಿಂತಿರುವ ನೂತನ ಚಿತಾಗಾರದ ಕಾಮಗಾರಿಯನ್ನೂ ಪೂರ್ಣಗೊಳಿಸಬೇಕು ಎಂದು ರಾಜಾ ನಾಯ್ಕ ಒತ್ತಾಯಿಸಿದ್ದಾರೆ.


