Friday, October 23, 2026
HomeLocal News‘ಹಿಂಬಾಲಕರ ಮೂಲಕ ಹೇಳಿಕೆ ಬೇಡ, ಶಾಸಕರೇ ಚರ್ಚೆಗೆ ಬನ್ನಿ’

‘ಹಿಂಬಾಲಕರ ಮೂಲಕ ಹೇಳಿಕೆ ಬೇಡ, ಶಾಸಕರೇ ಚರ್ಚೆಗೆ ಬನ್ನಿ’

ಯಲ್ಲಾಪುರ: ನದಿ ಜೋಡಣೆ ಹಾಗೂ ಜಿ+2 ಮನೆ ಹಂಚಿಕೆ ವಿಚಾರದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಹಿಂಬಾಲಕರ ಮೂಲಕ ಮಾಧ್ಯಮ ಹೇಳಿಕೆ ಕೊಡಿಸುವ ಬದಲು ನೇರವಾಗಿ ಶಾಸಕರೇ ಬಹಿರಂಗ ಚರ್ಚೆಗೆ ಬರಬೇಕು ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಒತ್ತಾಯಿಸಿದ್ದಾರೆ.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ಜೋಡಣೆ ವಿಷಯದಲ್ಲಿ ಶಿವರಾಮ ಹೆಬ್ಬಾರ್ ಅವರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಜಿ+2 ಮನೆ ಹಂಚಿಕೆ ವಿಚಾರದಲ್ಲಿಯೂ ಶ್ರೀಮಂತರಿಗೆ ಮನೆ ನೀಡಿ ಬಡವರಿಗೆ ಅನ್ಯಾಯ ಮಾಡಿದ್ದಾರೆ. ಈ ಎರಡೂ ವಿಷಯಗಳ ಕುರಿತು ಶಾಸಕರು ಮೌನ ಮುರಿದು ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು. ಈ ವಿಚಾರದಲ್ಲಿ ಅವರೊಂದಿಗೆ ಬಹಿರಂಗ ಚರ್ಚೆಗೂ ಸಿದ್ಧ ಎಂದು ಹೇಳಿದರು.

ಇತ್ತೀಚೆಗೆ ಕಾಂಗ್ರೆಸ್ಸಿಗರು ನಡೆಸಿದ ಸುದ್ದಿಗೋಷ್ಠಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯ ಬಗ್ಗೆಯೂ ಬಿಜೆಪಿ ಮುಖಂಡರು ಸ್ಪಷ್ಟನೆ ನೀಡಿದರು. ಮಾಧ್ಯಮಗಳ ಮುಂದೆ, ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಹಗಲಲ್ಲಿ ನಿಂದಿಸುವ ಕೆಲವರು ಸಂಜೆಯ ಬಳಿಕ ಅವರ ಕಾಲಿಗೆ ಬಿದ್ದು ಕ್ಷಮೆ ಕೋರಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ ಎಂಬ ವಿಷಯದ ಕುರಿತು ವರದಿಯಲ್ಲಿ ಉಲ್ಲೇಖವಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ, ಜನಪ್ರತಿನಿಧಿಯಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ್ ಅವರು ಕ್ಷೇತ್ರದ ಎಲ್ಲರಿಗೂ ಶಾಸಕರಾಗಿದ್ದಾರೆ. ಹೀಗಾಗಿ ವಿವಿಧ ಕೆಲಸಗಳಿಗಾಗಿ ಜನರು ಅವರ ಬಳಿ ತೆರಳುವುದರಲ್ಲಿ ತಪ್ಪೇನಿಲ್ಲ ಎಂದರು.

ಅದೇ ರೀತಿ, ಕೆಲಸ ಮಾಡಿಸಿಕೊಳ್ಳಲು ಶಾಸಕರ ಬಳಿ ಹೋಗುವ ಬಿಜೆಪಿಗರು ಯಾರು ಎಂಬುದನ್ನು ಕಾಂಗ್ರೆಸ್ಸಿಗರು ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದರು. ಎಷ್ಟೇ ಕಷ್ಟದ ಪರಿಸ್ಥಿತಿ ಎದುರಾದರೂ ತಾವು ಹಾಗೂ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಅವರು ಶಿವರಾಮ ಹೆಬ್ಬಾರ್ ಅವರ ಬಳಿ ಯಾವುದೇ ಕೆಲಸಕ್ಕಾಗಿ ಹೋಗಿಲ್ಲ. ಕಾಂಗ್ರೆಸ್ ಕಚೇರಿ ಎದುರು ‘ಬಿಜೆಪಿಗರಿಗೆ ಪ್ರವೇಶವಿಲ್ಲ’ ಎಂಬ ನಾಮಫಲಕ ಅಳವಡಿಸಿದರೂ ಅಭ್ಯಂತರವಿಲ್ಲ ಎಂದರು.

ಕೆಡಿಸಿಸಿ ಚುನಾವಣೆ ಸಂದರ್ಭದಲ್ಲಿ ಸಹಕಾರಿ ಸಂಘಗಳಲ್ಲಿ ಬಿಜೆಪಿ ಬೆಂಬಲಿತರ ಪ್ರಭಾವ ಹೆಚ್ಚಿದ್ದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದು ಹೇಗೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡರು, ವೈಯಕ್ತಿಕ ವಿಚಾರಗಳು ಹಾಗೂ ತೆರೆಮರೆಯಲ್ಲಿ ನಡೆದ ಬೆಳವಣಿಗೆಗಳಿಂದಾಗಿ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವ ಸಾಧ್ಯತೆಯಿದೆ ಎಂದರು.

ಸಹಕಾರಿ ಸಂಘಗಳಲ್ಲಿ ಬಿಜೆಪಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವು ರಾಜಕೀಯೇತರ ಸಂಘಟನೆಗಳಾಗಿವೆ. ಹೀಗಾಗಿ ಕೆಡಿಸಿಸಿ ಚುನಾವಣೆಯಲ್ಲಿ ಬಿಜೆಪಿ ಪ್ರಮುಖರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿರುವ ಸಾಧ್ಯತೆ ಇಲ್ಲದಿಲ್ಲ ಎಂದು ಸಮರ್ಥಿಸಿಕೊಂಡರು.

ಶಿವರಾಮ ಹೆಬ್ಬಾರ್ ಅವರ ವಿರುದ್ಧ ತಾವು ಬೆಲೇಕರೆ ಅದಿರು ಕಳವು ಪ್ರಕರಣ, ಸಿಡಿ ಹಗರಣ ಅಥವಾ ಅವರು ಸಕ್ಕರೆ ಕಾರ್ಖಾನೆ ಸ್ಥಾಪಿಸಿದಂತಹ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಶ್ನಿಸಿಲ್ಲ. ಆದರೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕುರಿತು ಭ್ರಷ್ಟಾಚಾರದ ಆರೋಪ ಮಾಡಲಾಗಿದೆ. ಇದು ಸರಿಯಲ್ಲ ಎಂದು ರಾಘವೇಂದ್ರ ಭಟ್ಟ ಅಸಮಾಧಾನ ವ್ಯಕ್ತಪಡಿಸಿದರು.

ಹರಿಪ್ರಕಾಶ ಕೋಣೆಮನೆ ಅವರು ಹಣ ಮಾಡುತ್ತಿದ್ದಾರೆ, ಶಿಕ್ಷಣ ಸಂಸ್ಥೆಯ ಮೂಲಕ ಹೆಚ್ಚಿನ ಹಣ ಗಳಿಸುತ್ತಿದ್ದಾರೆ ಎಂಬ ಆರೋಪ ಮಾಡುವ ಬದಲು ಶಿಕ್ಷಣ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಕೋಟ್ಯಂತರ ರೂ. ಉಳಿತಾಯವಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕೆ.ಟಿ. ಹೆಗಡೆ, ಗಣಪತಿ ಮಾನಿಗದ್ದೆ, ಗಣೇಶ ಪಾಠಣಕರ್, ಸೋಮೇಶ್ವರ ನಾಯ್ಕ ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share