ಶಿರಸಿ: ಹೋಟೆಲ್‌ನಲ್ಲಿ ತಮಗೆ ಬೇಕಾದ ಊಟ ಸಿದ್ಧಪಡಿಸಲು ತಡವಾಗುತ್ತದೆ ಎಂದು ಹೇಳಿದ್ದಕ್ಕೆ ಸಿಟ್ಟಿಗೆದ್ದ ಅರವಿಂದ ನಾಯ್ಕ ಎಂಬಾತ ರಾಗಿಹೊಸಳ್ಳಿಯ ಸೋಮೇಶ್ವರ ಹೋಟೆಲ್‌ನ ಸಪ್ಲೈಯರ್ ಪ್ರಕಾಶ ಜನಾರ್ಧನ ಗೌಡ ಎಂಬುವರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಂಜಗುಣಿ ನಿವಾಸಿ, ರಾಗಿಹೊಸಳ್ಳಿಯ ಸೋಮೇಶ್ವರ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಪ್ರಕಾಶ ಜನಾರ್ಧನ ಗೌಡ ಹಲ್ಲೆಗೊಳಗಾದವರಾಗಿದ್ದು, ರಾಗಿಹೊಸಳ್ಳಿ ಪುಟ್ಟಬೆಣ ನಿವಾಸಿ ಅರವಿಂದ ನಾಯ್ಕ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.28ರಂದು ರಾತ್ರಿ 10.30ರ ಸುಮಾರಿಗೆ ರಾಗಿಹೊಸಳ್ಳಿಯ ಸೋಮೇಶ್ವರ ಹೋಟೆಲ್‌ಗೆ ಊಟಕ್ಕೆಂದು ಬಂದಿದ್ದ ಅರವಿಂದ ನಾಯ್ಕ ಬಳಿ ಪ್ರಕಾಶ ತೆರಳಿ ಯಾವ ಊಟ ಬೇಕು ಎಂದು ಕೇಳಿದ್ದಾರೆ. ಆಗ ಅರವಿಂದ ‘ಫಿಶ್ ಫ್ರೈ’ ಬೇಕೆಂದು ತಿಳಿಸಿದ್ದಾರೆ.
ಫಿಶ್ ಫ್ರೈ ಸಿದ್ಧಪಡಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಪ್ರಕಾಶ ಹೇಳಿದಾಗ ಅರವಿಂದ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ. ಬಳಿಕ ಅವಾಚ್ಯವಾಗಿ ಬೈದು ಪ್ರಕಾಶನ ಎಡ ಕೆನ್ನೆಗೆ ಕೈಯಿಂದ ಹೊಡೆದಿದ್ದಲ್ಲದೆ, ಕುತ್ತಿಗೆಯ ಬಲಭಾಗಕ್ಕೆ ಪರಚಿ, ಹೊಟ್ಟೆಗೆ ಗುದ್ದಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ಕುರಿತು ಪ್ರಕಾಶ ಅವರು ಅ.3ರಂದು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


