Thursday, October 22, 2026
HomeLocal Newsಬರಗಾಲ; ಕಪ್ಪೆಗೂ ಒದಗಿಬಂತು ಶಾದಿ ಭಾಗ್ಯ!

ಬರಗಾಲ; ಕಪ್ಪೆಗೂ ಒದಗಿಬಂತು ಶಾದಿ ಭಾಗ್ಯ!

ಯಲ್ಲಾಪುರದ ಹಿಟ್ಟಿನಬೈಲ್‌ ಗ್ರಾಮದಲ್ಲಿ ʻದೆಂಡ್ಲಿ ಸುಗ್ಗಿʼ ವಿಶೇಷ ಆಚರಣೆ

ಯಲ್ಲಾಪುರ: ಈ ವರ್ಷ ನಿರೀಕ್ಷಿತ ಮಳೆಯಾಗದೇ ಬರಗಾಲ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯಲ್ಲಾಪುರದ ಹಿಟ್ಟಿನಬೈಲ್‌ನಲ್ಲಿ ಕಪ್ಪೆಗಳಿಗೆ ಮದುವೆ ಮಾಡಿಸಿ ಮಳೆಗಾಗಿ ಮೊರೆಯಿಟ್ಟಿದ್ದಾರೆ.

ಮಳೆ ಕೈಕೊಟ್ಟಾಗ ಆಕಾಶದತ್ತ ಮುಖ ಮಾಡಿ ಕಾಯುವುದು ಒಂದೆಡೆಯಾದರೆ, ಮಳೆರಾಯನನ್ನು ಒಲಿಸಿಕೊಳ್ಳಲು ಹಳ್ಳಿಗಳಲ್ಲಿ ನಡೆದುಕೊಂಡು ಬಂದಿರುವ ನಂಬಿಕೆ-ಆಚರಣೆಗಳನ್ನು ಮತ್ತೆ ನೆನಪಿಸಿಕೊಳ್ಳುವುದು ಮತ್ತೊಂದೆಡೆ. ಪರ್ಜನ್ಯ, ಕತ್ತೆಗಳ ಮದುವೆ, ಇತ್ಯಾದಿ ವಿಶೇಷ ಆಚರಣೆಗಳು ನಡೆಯುತ್ತವೆ.

ಇದೇ ನಂಬಿಕೆಯೊಂದಿಗೆ ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಬಾರಿ ‘ಕಪ್ಪೆ ಮದುವೆ’ ನಡೆಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.

ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಡಗಲ್ ಗ್ರಾಮದ ಹಿಟ್ಟಿನಬೈಲ್ ಹಾಗೂ ಸುತ್ತಮುತ್ತಲಿನ ಸುಮಾರು 10 ಊರುಗಳ ಗ್ರಾಮಸ್ಥರು ಸೇರಿಕೊಂಡು ಅ.4ರಂದು ‘ಕಪ್ಪೆ ಮದುವೆ’ (ದಿಬ್ಬಣ) ಹಾಗೂ ದೆಂಡ್ಲಿ ಸುಗ್ಗಿ ಆಚರಣೆ ನಡೆಸಿದರು.

ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಈ ಆಚರಣೆಯಲ್ಲಿ ಗ್ರಾಮಸ್ಥರು ಇಡೀ ದಿನ ಉಪವಾಸವಿದ್ದು, ಪ್ರತಿ ಊರಿಗೂ ಬರಿಗಾಲಿನಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಕಪ್ಪೆಗೆ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಲಾಯಿತು.

ಪೂಜೆ ನೆರವೇರಿಸಿದ ಬಳಿಕ ಕಪ್ಪೆಯನ್ನು ನೀರು ಇರುವ ಕೆರೆಗೆ ವಿಸರ್ಜಿಸಲಾಯಿತು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಬೇಕು, ಜಲಮೂಲಗಳು ತುಂಬಬೇಕು ಹಾಗೂ ರೈತರು ಬೆಳೆದ ಬೆಳೆಗಳು ಸಮೃದ್ಧವಾಗಿ ಫಸಲು ನೀಡಬೇಕು ಎಂಬ ಆಶಯದೊಂದಿಗೆ ಗ್ರಾಮಸ್ಥರು ಈ ವಿಶಿಷ್ಟ ಆಚರಣೆ ನಡೆಸಿದರು.

ಮಳೆಗಾಗಿ ಗ್ರಾಮೀಣ ಭಾಗದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಇಂತಹ ಸ್ಥಳೀಯ ಆಚರಣೆಗಳು ಇಂದಿಗೂ ಜನರ ನಂಬಿಕೆ ಹಾಗೂ ಸಮುದಾಯದ ಒಗ್ಗಟ್ಟಿನೊಂದಿಗೆ ಮುಂದುವರಿಯುತ್ತಿರುವುದು ಗಮನ ಸೆಳೆಯಿತು.

ದೆಂಡ್ಲಿ ಸುಗ್ಗಿ ವಿಶೇಷವಾಗಿ ಮರಾಠಿ ಸಮುದಾಯದ ಆಚರಣೆಯಾಗಿದ್ದರೂ ಹಿಟ್ಟಿನಬೈಲ್‌ ಸೇರಿದಂತೆ ಸುತ್ತಲಿನ ಗ್ರಾಮಗಳ ಎಲ್ಲಾ ಸಮುದಾಯದ ಸಾರ್ವಜನಿಕರೂ ಈ ಆಚರಣೆಯಲ್ಲಿ ಒಟ್ಟಾಗಿ ಪಾಲ್ಗೊಂಡರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share