ಯಲ್ಲಾಪುರದ ಹಿಟ್ಟಿನಬೈಲ್ ಗ್ರಾಮದಲ್ಲಿ ʻದೆಂಡ್ಲಿ ಸುಗ್ಗಿʼ ವಿಶೇಷ ಆಚರಣೆ
ಯಲ್ಲಾಪುರ: ಈ ವರ್ಷ ನಿರೀಕ್ಷಿತ ಮಳೆಯಾಗದೇ ಬರಗಾಲ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯಲ್ಲಾಪುರದ ಹಿಟ್ಟಿನಬೈಲ್ನಲ್ಲಿ ಕಪ್ಪೆಗಳಿಗೆ ಮದುವೆ ಮಾಡಿಸಿ ಮಳೆಗಾಗಿ ಮೊರೆಯಿಟ್ಟಿದ್ದಾರೆ.
ಮಳೆ ಕೈಕೊಟ್ಟಾಗ ಆಕಾಶದತ್ತ ಮುಖ ಮಾಡಿ ಕಾಯುವುದು ಒಂದೆಡೆಯಾದರೆ, ಮಳೆರಾಯನನ್ನು ಒಲಿಸಿಕೊಳ್ಳಲು ಹಳ್ಳಿಗಳಲ್ಲಿ ನಡೆದುಕೊಂಡು ಬಂದಿರುವ ನಂಬಿಕೆ-ಆಚರಣೆಗಳನ್ನು ಮತ್ತೆ ನೆನಪಿಸಿಕೊಳ್ಳುವುದು ಮತ್ತೊಂದೆಡೆ. ಪರ್ಜನ್ಯ, ಕತ್ತೆಗಳ ಮದುವೆ, ಇತ್ಯಾದಿ ವಿಶೇಷ ಆಚರಣೆಗಳು ನಡೆಯುತ್ತವೆ.
ಇದೇ ನಂಬಿಕೆಯೊಂದಿಗೆ ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಈ ಬಾರಿ ‘ಕಪ್ಪೆ ಮದುವೆ’ ನಡೆಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಡಗಲ್ ಗ್ರಾಮದ ಹಿಟ್ಟಿನಬೈಲ್ ಹಾಗೂ ಸುತ್ತಮುತ್ತಲಿನ ಸುಮಾರು 10 ಊರುಗಳ ಗ್ರಾಮಸ್ಥರು ಸೇರಿಕೊಂಡು ಅ.4ರಂದು ‘ಕಪ್ಪೆ ಮದುವೆ’ (ದಿಬ್ಬಣ) ಹಾಗೂ ದೆಂಡ್ಲಿ ಸುಗ್ಗಿ ಆಚರಣೆ ನಡೆಸಿದರು.
ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಈ ಆಚರಣೆಯಲ್ಲಿ ಗ್ರಾಮಸ್ಥರು ಇಡೀ ದಿನ ಉಪವಾಸವಿದ್ದು, ಪ್ರತಿ ಊರಿಗೂ ಬರಿಗಾಲಿನಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಕಪ್ಪೆಗೆ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಲಾಯಿತು.
ಪೂಜೆ ನೆರವೇರಿಸಿದ ಬಳಿಕ ಕಪ್ಪೆಯನ್ನು ನೀರು ಇರುವ ಕೆರೆಗೆ ವಿಸರ್ಜಿಸಲಾಯಿತು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಬೇಕು, ಜಲಮೂಲಗಳು ತುಂಬಬೇಕು ಹಾಗೂ ರೈತರು ಬೆಳೆದ ಬೆಳೆಗಳು ಸಮೃದ್ಧವಾಗಿ ಫಸಲು ನೀಡಬೇಕು ಎಂಬ ಆಶಯದೊಂದಿಗೆ ಗ್ರಾಮಸ್ಥರು ಈ ವಿಶಿಷ್ಟ ಆಚರಣೆ ನಡೆಸಿದರು.
ಮಳೆಗಾಗಿ ಗ್ರಾಮೀಣ ಭಾಗದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಇಂತಹ ಸ್ಥಳೀಯ ಆಚರಣೆಗಳು ಇಂದಿಗೂ ಜನರ ನಂಬಿಕೆ ಹಾಗೂ ಸಮುದಾಯದ ಒಗ್ಗಟ್ಟಿನೊಂದಿಗೆ ಮುಂದುವರಿಯುತ್ತಿರುವುದು ಗಮನ ಸೆಳೆಯಿತು.
ದೆಂಡ್ಲಿ ಸುಗ್ಗಿ ವಿಶೇಷವಾಗಿ ಮರಾಠಿ ಸಮುದಾಯದ ಆಚರಣೆಯಾಗಿದ್ದರೂ ಹಿಟ್ಟಿನಬೈಲ್ ಸೇರಿದಂತೆ ಸುತ್ತಲಿನ ಗ್ರಾಮಗಳ ಎಲ್ಲಾ ಸಮುದಾಯದ ಸಾರ್ವಜನಿಕರೂ ಈ ಆಚರಣೆಯಲ್ಲಿ ಒಟ್ಟಾಗಿ ಪಾಲ್ಗೊಂಡರು.


