ಯಲ್ಲಾಪುರ: ನಂದೊಳ್ಳಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ 2ನೇ ಅವಧಿಗೆ ನೂತನ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆಯಾಗಿದೆ. ಅಧ್ಯಕ್ಷರಾಗಿ ತಿಮ್ಮಣ್ಣ ವಿ. ಭಾಗ್ವತ ಹಾಗೂ ಉಪಾಧ್ಯಕ್ಷರಾಗಿ ನಾರಾಯಣ ಭಟ್ಟ ಭಟ್ರಕೇರಿ ಅವರು 2ನೇ ಬಾರಿಗೂ ಆಯ್ಕೆಯಾಗಿದ್ದಾರೆ.
ಎಲ್ಲ ನಿರ್ದೇಶಕರ ಒಮ್ಮತದ ಅಭ್ಯರ್ಥಿಗಳಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಚುನಾವಣಾಧಿಕಾರಿ ಭಾಸ್ಕರ್ ನಾಯ್ಕ ಅವರ ಸಮ್ಮುಖದಲ್ಲಿ ಪ್ರಕ್ರಿಯೆ ಪೂರ್ಣಗೊಂಡಿತು.
ಈ ಸಂದರ್ಭದಲ್ಲಿ ನೂತನ ನಿರ್ದೇಶಕ ಎಂ.ಆರ್. ಭಟ್ಟ ಹಾಗೂ ಯು.ಕೆ. ಬ್ಯಾಂಕ್ ನಿರ್ದೇಶಕ ತಮ್ಮಣ್ಣ ಭಟ್ಟ ಕವಡಿಕೆರೆ ಅವರು ಸಂಘದ ಬೆಳವಣಿಗೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು.
ನೂತನ ಅಧ್ಯಕ್ಷ ತಿಮ್ಮಣ್ಣ ವಿ. ಭಾಗ್ವತ ಹಾಗೂ ಉಪಾಧ್ಯಕ್ಷ ನಾರಾಯಣ ಭಟ್ಟ ಭಟ್ರಕೇರಿ ಮಾತನಾಡಿ, ಮತ್ತೊಮ್ಮೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಸಂಘದ ನಿರ್ದೇಶಕರಿಗೆ, ಸಂಘದ ಏಳ್ಗೆಗೆ ಸದಾ ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮತ್ತು ಸಂಘದ ಸಮಸ್ತ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.
ಸಂಘವನ್ನು ಇನ್ನಷ್ಟು ಯಶಸ್ವಿಯಾಗಿ ಮುನ್ನಡೆಸುವ ಜೊತೆಗೆ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಯು.ಕೆ. ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ತಮ್ಮಣ್ಣ ಭಟ್ಟ ಕವಡಿಕೆರೆ, ಸಿವಿಲ್ ಗುತ್ತಿಗೆದಾರ ಗಜಾನನ ಭಟ್ಟ ಕುಂಕಿ, ತಿಮ್ಮಣ್ಣ ಎಸ್. ಭಟ್ಟ ತಟ್ಟಿಗದ್ದೆ, ನಾಗೇಶ್ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದು, ನೂತನ ಆಡಳಿತ ಮಂಡಳಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶುಭಾಶಯ ಕೋರಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಗುರುಪ್ರಸಾದ್ ಹೆಗಡೆ ಸ್ವಾಗತಿಸಿದರು. ನಾರಾಯಣ ಭಟ್ಟ ಭಟ್ರಕೇರಿ ವಂದಿಸಿದರು.


