ಶಿರಸಿ: 2024ರಲ್ಲೇ ಮರಣ ಹೊಂದಿದ್ದ ಸಂದೇಶ ಬೋರಕರ್ ಅವರ ಹೆಸರಿನಲ್ಲಿದ್ದ ರಾಯಲ್ ಎನ್‌ಫೀಲ್ಡ್ ಬೈಕನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಯತ್ನಿಸಿದ್ದಾರೆಂದು ಆರೋಪಿಸಿ ಶಿರಸಿಯ ಶರದ್ ಬೋರಕರ್ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಶಿರಸಿಯ ಅಯ್ಯಪ್ಪನಗರದ 2ನೇ ಕ್ರಾಸ್, ಚೌಡೇಶ್ವರಿ ಕಾಲೋನಿ ನಿವಾಸಿ ಶರದ್ ಬೋರಕರ್ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ವಾಹನ ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸಂದೇಶ ಬೋರಕರ್ ಅವರ ಪತ್ನಿ ನಳಿನ ಎನ್. ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಳಿನ ಎನ್. ಅವರು ಮೈಸೂರಿನ ಎ.ಡಿ.ಎಲ್.ಆರ್. ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೆಂಚನಾಲ ಗ್ರಾಮದ ವಡ್ಡಿನಗದ್ದೆ ನಿವಾಸಿ.
ದೂರಿನ ಪ್ರಕಾರ, ಸಂದೇಶ ಬೋರಕರ್ ಅವರು 2024ರ ಸೆ.7ರಂದು ಕಾರವಾರದಲ್ಲಿ ಮೃತಪಟ್ಟಿದ್ದರು. ಅವರ ಹೆಸರಿನಲ್ಲಿ ಕೆಎ-31/ಇಇ-6143 ನೋಂದಣಿ ಸಂಖ್ಯೆಯ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಇತ್ತು.
ಆದರೆ 2025ರ ಜು.10ರಂದು ಶರದ್ ಬೋರಕರ್ ಅವರು ಶಿರಸಿ ಆರ್‌ಟಿಒ ಕಚೇರಿಗೆ ಈ ಬೈಕ್ ಅನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಾಹನದ ಮಾಲೀಕರಾಗಿದ್ದ ಸಂದೇಶ ಬೋರಕರ್ ಅವರು ಅದಕ್ಕೂ ಮುನ್ನವೇ ಮೃತಪಟ್ಟಿದ್ದರು. ಆದರೂ ಅವರ ಸಹಿಯನ್ನು ಒಳಗೊಂಡ ದಾಖಲೆಗಳನ್ನು ಸೃಷ್ಟಿಸಿ ಆರ್‌ಟಿಒಗೆ ಸಲ್ಲಿಸಲಾಗಿದೆ ಎಂದು ನಳಿನ ಅವರು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ತಡವಾಗಿ ತಿಳಿದುಬಂದ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ನಳಿನ ಅವರು ತಿಳಿಸಿದ್ದಾರೆ. ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


