ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದಡಿ ಶಿರಸಿಯ ಗಣೇಶನಗರದ ಹರೀಶ ಅರುಣ ಹೆಗಡೆ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಅ.5ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ಶಿರಸಿ ನಗರದ ಆನೆಹೊಂಡ ಕಡೆಗೆ ತೆರಳುವ ಕಚ್ಚಾ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಹರೀಶ ಹೆಗಡೆ ಯಾವುದೋ ಅಮಲು ಪದಾರ್ಥ ಸೇವಿಸಿರುವ ಅನುಮಾನ ಪೊಲೀಸರಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಿರಸಿ ನಗರ ಠಾಣೆಯ ಪೊಲೀಸರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಳಿಕ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕರ್ತವ್ಯನಿರತ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಲಭ್ಯವಾದ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಶಿರಸಿ ನಗರ ಠಾಣೆಯ ತನಿಖಾ ವಿಭಾಗದ ಪೊಲೀಸ್ ಉಪನಿರೀಕ್ಷಕ ನಾರಾಯಣ ಆರ್. ರಾಠೋಡ ಅವರು ಸರ್ಕಾರದ ಪರವಾಗಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.


