ಯಲ್ಲಾಪುರ: ರೈತರ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಉದ್ದೇಶದಿಂದ ಅ.8ರಂದು ಹಾಸಣಗಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಕಿಸಾನ್ ಗೋಷ್ಠಿ ಆಯೋಜಿಸಲಾಗಿದೆ.
ಕೃಷಿ ಇಲಾಖೆ, ಜಿಲ್ಲಾ ಪಂಚಾಯಿತಿ ಉತ್ತರ ಕನ್ನಡ, ತೋಟಗಾರಿಕೆ ಇಲಾಖೆ, ಯಲ್ಲಾಪುರ ಕೃಷಿ ಇಲಾಖೆ, ಯಲ್ಲಾಪುರ ತೋಟಗಾರಿಕೆ ಇಲಾಖೆ ಹಾಗೂ ಹಾಸಣಗಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ಆತ್ಮ ಯೋಜನೆಯಡಿ ಈ ಕಾರ್ಯಕ್ರಮ ನಡೆಯಲಿದೆ.
ಅ.8ರಂದು ಬೆಳಿಗ್ಗೆ 10.30ಕ್ಕೆ ಹಾಸಣಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸಣಗಿ ಸೊಸೈಟಿ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ವಹಿಸಲಿದ್ದಾರೆ.
ತಾಲೂಕು ಕೃಷಿ ಸಮಾಜದ ಅಧ್ಯಕ್ಷ ವೆಂಕಟ್ರಮಣ ಎನ್. ಭಟ್ಟ ಕಾರೆಮನೆ, ಆತ್ಮ ರೈತ ಸಲಹಾ ಸಮಿತಿ ಅಧ್ಯಕ್ಷ ಗಣೇಶ ಎಸ್. ಹೆಗಡೆ ಸವಣಗೇರಿ, ಹಾಸಣಗಿ ಸೊಸೈಟಿ ಉಪಾಧ್ಯಕ್ಷ ತಿಮ್ಮಪ್ಪ ವಿ. ಹೆಗಡೆ ಬೆದೆಹಕ್ಲ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸತೀಶ ಹೆಗಡೆ ಹಾಗೂ ಯಲ್ಲಾಪುರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಿವೃತ್ತ ವಿಜ್ಞಾನಿ, ಸಿಪಿಸಿಆರ್ಐ ಕಾಸರಗೋಡಿನ ಡಾ. ವಿನಾಯಕ ಹೆಗಡೆ, ಶಿರಸಿ ಸಹಾಯಕ ತೋಟಗಾರಿಕೆ ನಿರ್ದೇಶಕ ಗಣೇಶ ಹೆಗಡೆ ಹಾಗೂ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ರೈತರಿಗೆ ಮಾಹಿತಿ ನೀಡಲಿದ್ದಾರೆ.
ಗೋಷ್ಠಿಯಲ್ಲಿ ಮಣ್ಣಿನ ಆರೋಗ್ಯ, ಅಡಿಕೆಯಲ್ಲಿ ಎಲೆಚುಕ್ಕೆ ರೋಗದ ಸಮಗ್ರ ನಿರ್ವಹಣೆ, ಅಡಿಕೆಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ, ಅಡಿಕೆ ತೋಟದಲ್ಲಿ ಪರ್ಯಾಯ ಬೆಳೆಗಳ ಸಾಧ್ಯತೆ ಹಾಗೂ ಅಡಿಕೆ ತೋಟದಲ್ಲಿ ಅಂತರ್ಬೆಳೆಯಾಗಿ ಕಾಫಿ ಬೆಳೆಯುವ ಸಾಧ್ಯತೆ ಕುರಿತು ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತದೆ.
ಹಾಸಣಗಿ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೋಷ್ಠಿಯ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.


