ಭಟ್ಕಳ: ವಧೆ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಶಿರಾಲಿ ಚೆಕ್ಪೋಸ್ಟ್ನಲ್ಲಿ ಪೊಲೀಸರು ಸುಮಾರು ರೂ.13 ಲಕ್ಷ ಮೌಲ್ಯದ 13 ಜಾನುವಾರುಗಳನ್ನು ರಕ್ಷಿಸಿರುವ ಘಟನೆ ಅ.6ರ ಮುಂಜಾನೆ ನಡೆದಿದೆ.
ಪೊಲೀಸ್ ದೂರಿನ ಪ್ರಕಾರ, ಟಾಟಾ 909 ಲಾರಿ (ಕೆಎ-37/9555)ಯಲ್ಲಿ 13 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ನೀರು ಹಾಗೂ ಹುಲ್ಲು ನೀಡದೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಜಾನುವಾರು ಸಾಗಾಟಕ್ಕೆ ಅಗತ್ಯ ಪರವಾನಿಗೆ ಪಡೆಯದೇ ಎಲ್ಲಿಂದಲೋ ಜಾನುವಾರುಗಳನ್ನು ತುಂಬಿಕೊಂಡು ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಸಾಗಿಸಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅ.6ರಂದು ರಾತ್ರಿ ಸುಮಾರು 2.50ರ ವೇಳೆಗೆ ಶಿರಾಲಿ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಲಾರಿಯ ಚಾಲಕ ಹಾಗೂ ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಕ್ಷಿಸಲಾದ ಜಾನುವಾರುಗಳ ಮೌಲ್ಯ ಸುಮಾರು ರೂ.13 ಲಕ್ಷ ಎಂದು ಅಂದಾಜಿಸಲಾಗಿದ್ದು, ಪ್ರಕರಣದಲ್ಲಿ ಕಳುವಾಗಿರುವ/ಬಾಧಿಯಾಗಿರುವ ಸ್ವತ್ತಿನ ಒಟ್ಟು ಮೌಲ್ಯ ರೂ.20 ಲಕ್ಷ ಎಂದು ದಾಖಲಿಸಲಾಗಿದೆ. ಚಾಲಕ ಮತ್ತು ಕ್ಲೀನರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.


