Friday, October 23, 2026
HomeLocal News‘ನಮ್ಮ ಮನೆ ನಮ್ಮ ಹಕ್ಕು’ ಹೋರಾಟಕ್ಕೆ ಮೊದಲ ಜಯ: ಸದಾನಂದ ಭಟ್

‘ನಮ್ಮ ಮನೆ ನಮ್ಮ ಹಕ್ಕು’ ಹೋರಾಟಕ್ಕೆ ಮೊದಲ ಜಯ: ಸದಾನಂದ ಭಟ್

ಶಿರಸಿ: ಅತಿಕ್ರಮಣ ಜಾಗದಲ್ಲಿರುವ ಮನೆಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಕುರಿತು ರಾಜ್ಯ ಸರ್ಕಾರ ಆಗಸ್ಟ್ 13ರಂದು ಹೊರಡಿಸಿದ್ದ ಆದೇಶದ ಕೆಲ ಅಂಶಗಳ ಕುರಿತು ಮುಂದಿನ ಆದೇಶದವರೆಗೆ ಯಾವುದೇ ಪ್ರಕ್ರಿಯೆ ಕೈಗೊಳ್ಳದಂತೆ ಅಕ್ಟೋಬರ್ 8ರಂದು ಹೊರಡಿಸಿರುವ ಆದೇಶವು ಬಿಜೆಪಿಯ ‘ನಮ್ಮ ಮನೆ ನಮ್ಮ ಹಕ್ಕು’ ಹೋರಾಟಕ್ಕೆ ದೊರೆತ ಮೊದಲ ಜಯ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸದಾನಂದ ಭಟ್ ನಿಡಗೋಡ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರದ ಈ ತಾತ್ಕಾಲಿಕ ಆದೇಶವು ಅತಿಕ್ರಮಣದಾರರ ಮೇಲಿನ ತೂಗುಗತ್ತಿಯನ್ನು ಸಂಪೂರ್ಣವಾಗಿ ತೆಗೆದುಹಾಕಿಲ್ಲ. ಆದೇಶವನ್ನು ಶಾಶ್ವತವಾಗಿ ಹಿಂಪಡೆಯದೆ, ಮುಂದಿನ ಆದೇಶದವರೆಗೆ ಮಾತ್ರ ಪ್ರಕ್ರಿಯೆ ಕೈಗೊಳ್ಳದಂತೆ ಸೂಚಿಸಿರುವುದು ಸಮಸ್ಯೆಗೆ ಪೂರ್ಣ ಪರಿಹಾರವಲ್ಲ ಎಂದು ತಿಳಿಸಿದ್ದಾರೆ.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಾರ್ಗದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ‘ನಮ್ಮ ಮನೆ ನಮ್ಮ ಹಕ್ಕು’ ಹೋರಾಟ ನಡೆಸಿದ್ದರು. ಜಿಲ್ಲೆಯ 200ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಜನರ ಸಹಭಾಗಿತ್ವದಲ್ಲಿ ಆಂದೋಲನ ನಡೆಸಿ, ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಸುಮಾರು 15 ಸಾವಿರಕ್ಕೂ ಹೆಚ್ಚು ಮನವಿಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು ಎಂದು ಸದಾನಂದ ಭಟ್ ತಿಳಿಸಿದ್ದಾರೆ.

ಅರಣ್ಯ, ಬೆಟ್ಟ, ಗಾಂವಠಾಣ ಸೇರಿದಂತೆ ವಿವಿಧ ಅತಿಕ್ರಮಣ ಜಾಗಗಳಲ್ಲಿ ಹಲವು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ತೆರಿಗೆ ಪಾವತಿಸುತ್ತಿದ್ದವರನ್ನು ಏಕಾಏಕಿ ತೆರಿಗೆ ಪಟ್ಟಿಯಿಂದ ಕೈಬಿಡುವ ನಿರ್ಧಾರವನ್ನು ಬಿಜೆಪಿ ವಿರೋಧಿಸಿತ್ತು. ಈ ಕುರಿತು ಜನಪರ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ತಾತ್ಕಾಲಿಕವಾಗಿ ಪ್ರಕ್ರಿಯೆಗೆ ತಡೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಈ ವಿಚಾರದಲ್ಲಿ ಕಾಂಗ್ರೆಸ್ ಶಾಸಕರು ಈವರೆಗೆ ಸಂಸದ ಕಾಗೇರಿ ಹಾಗೂ ಬಿಜೆಪಿ ಹೋರಾಟದ ಕುರಿತು ವಿವಿಧ ರೀತಿಯ ಆರೋಪಗಳನ್ನು ಮಾಡಿದ್ದಾರೆ. ಇದೀಗ ಸರ್ಕಾರ ತಮ್ಮ ಹೇಳಿಕೆ ಹಾಗೂ ಪ್ರಯತ್ನದಿಂದಲೇ ಆದೇಶವನ್ನು ತಡೆಹಿಡಿದಿದೆ ಎಂದು ಹೇಳಿಕೊಳ್ಳುತ್ತಿರುವುದು ಯಾವ ನೈತಿಕತೆ ಎಂದು ಸದಾನಂದ ಭಟ್ ಪ್ರಶ್ನಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರ ಆಕ್ರೋಶವನ್ನು ತಣಿಸಲು ಸರ್ಕಾರ ಈ ತಾತ್ಕಾಲಿಕ ಕ್ರಮ ಕೈಗೊಂಡಿರುವಂತಿದೆ ಎಂದು ಅವರು ಆರೋಪಿಸಿದ್ದಾರೆ. ಈ ವಿಚಾರವನ್ನು ಬಿಜೆಪಿ ಶಾಸಕರಾದ ಸುನಿಲ್ ಕುಮಾರ್ ಕಾರ್ಕಳ ಹಾಗೂ ದಿನಕರ ಶೆಟ್ಟಿ ಕುಮುಟಾ ಅವರು ವಿಧಾನಸಭೆಯಲ್ಲಿಯೂ ಪ್ರಸ್ತಾಪಿಸಿದ್ದರು ಎಂದು ತಿಳಿಸಿದ್ದಾರೆ.

ತಾತ್ಕಾಲಿಕ ಆದೇಶ ತಮ್ಮ ಪ್ರಯತ್ನದಿಂದಲೇ ಹೊರಬಂದಿದೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದರೆ, ಆದೇಶವನ್ನು ಶಾಶ್ವತವಾಗಿ ಯಾವಾಗ ಹಿಂಪಡೆಯಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅಲ್ಲದೆ, ಶಾಶ್ವತವಾಗಿ ಆದೇಶ ಹಿಂಪಡೆದಿರುವ ಪ್ರತಿಯನ್ನು ಜನರ ಮುಂದೆ ಇಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅತಿಕ್ರಮಣದಾರರನ್ನು ತೆರಿಗೆ ಪಟ್ಟಿಯಿಂದ ಹೊರಗಿಡುವ ಆದೇಶವನ್ನು ಮೊದಲು ಏಕೆ ಹೊರಡಿಸಲಾಯಿತು ಎಂಬುದನ್ನೂ ಕಾಂಗ್ರೆಸ್ ಶಾಸಕರು ಜನರಿಗೆ ವಿವರಿಸಬೇಕು. ಸರ್ಕಾರ ಆದೇಶವನ್ನು ಸಂಪೂರ್ಣವಾಗಿ ಹಿಂಪಡೆಯುವವರೆಗೆ ಹಾಗೂ ಅತಿಕ್ರಮಣ ಜಾಗದಲ್ಲಿರುವ ಮನೆಗಳನ್ನು ಯಾವುದೇ ಕಾರಣಕ್ಕೂ ತೆರಿಗೆ ಪಟ್ಟಿಯಿಂದ ಕೈಬಿಡದಂತೆ ಖಚಿತಪಡಿಸುವವರೆಗೆ ಬಿಜೆಪಿ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಸದಾನಂದ ಭಟ್ ನಿಡಗೋಡ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share