ಒಂದು ಕಾಲದಲ್ಲಿ ಮನೆಯ ಅಡುಗೆಮನೆಗೆ ಸೀಮಿತವಾಗಿದ್ದ ಕೈಗಳು ಇಂದು ಅದೇ ಅಡುಗೆಯನ್ನು ಉದ್ಯಮವನ್ನಾಗಿ ಮಾಡಿಕೊಂಡು ಆದಾಯ ಗಳಿಸುತ್ತಿವೆ. ಗ್ರಾಹಕರೊಂದಿಗೆ ಮಾತನಾಡುತ್ತಿವೆ. ಲೆಕ್ಕಪತ್ರ ನೋಡುತ್ತಿವೆ. ವ್ಯಾಪಾರದ ಲಾಭ-ನಷ್ಟ ಲೆಕ್ಕ ಹಾಕುತ್ತಿವೆ. ಅವಕಾಶ ಸಿಕ್ಕರೆ ಗ್ರಾಮೀಣ ಮಹಿಳೆಯರೂ ಉದ್ಯಮ ನಡೆಸಬಲ್ಲರು ಎಂಬುದನ್ನು ತೋರಿಸುತ್ತಿರುವ ವೇದಿಕೆಯಾಗಿ ‘ಅಕ್ಕ ಕೆಫೆ’ ರೂಪುಗೊಳ್ಳುತ್ತಿದೆ.
ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಸ್ವಸಹಾಯ ಗುಂಪುಗಳ ಮೂಲಕ ಸುಸ್ಥಿರ ಜೀವನೋಪಾಯ ಚಟುವಟಿಕೆಗಳನ್ನು ರೂಪಿಸುವ ಉದ್ದೇಶದಿಂದ ಸಂಜೀವಿನಿ ಎನ್ಆರ್ಎಲ್ಎಂ ಯೋಜನೆಯಡಿ ರಾಜ್ಯದಲ್ಲಿ ಜಾರಿಗೆ ಬಂದಿರುವ ಅಕ್ಕ ಕೆಫೆ ಯೋಜನೆ, ಮಹಿಳೆಯರಿಗೆ ಹೋಟೆಲ್ ಉದ್ಯಮದ ಮೂಲಕ ಹೊಸ ಆದಾಯದ ಅವಕಾಶವನ್ನು ತೆರೆದಿದೆ.
ಇದು ಕೇವಲ ತಿಂಡಿ-ಊಟ ಮಾರಾಟ ಮಾಡುವ ಒಂದು ಸಣ್ಣ ಕೆಫೆಯಲ್ಲ. ಆಹಾರ ತಯಾರಿಸುವುದರಿಂದ ಹಿಡಿದು ಗ್ರಾಹಕರನ್ನು ನಿರ್ವಹಿಸುವುದು, ಲೆಕ್ಕಪತ್ರ ನೋಡಿಕೊಳ್ಳುವುದು, ಖರೀದಿ-ಮಾರಾಟದ ವ್ಯವಹಾರ ನಡೆಸುವುದು ಸೇರಿದಂತೆ ಉದ್ಯಮ ನಿರ್ವಹಣೆಯ ಹಲವು ಕೌಶಲ್ಯಗಳನ್ನು ಮಹಿಳೆಯರು ಇಲ್ಲಿಯೇ ಕಲಿಯುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಕ ಕೆಫೆಗೆ ಉತ್ತಮ ಸ್ಪಂದನೆ ದೊರೆತಿದೆ. ಕಾರವಾರ ಮತ್ತು ಮುರುಡೇಶ್ವರದಲ್ಲಿ ಈಗಾಗಲೇ ಕೆಫೆಗಳು ಕಾರ್ಯಾರಂಭ ಮಾಡಿದ್ದು, ಅವುಗಳ ವ್ಯವಹಾರಿಕ ಯಶಸ್ಸು ಯೋಜನೆಯ ಸಾಧ್ಯತೆಯನ್ನು ತೋರಿಸಿದೆ.
ಕಾರವಾರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕಡವಾಡದ ಶ್ರೀ ಸಿದ್ಧಿ ವಿನಾಯಕ ಮಹಿಳಾ ಸ್ವಸಹಾಯ ಗುಂಪಿನ ವತಿಯಿಂದ 2025ರ ಜುಲೈನಲ್ಲಿ ಆರಂಭವಾದ ಅಕ್ಕ ಕೆಫೆ ಇದುವರೆಗೆ ಸುಮಾರು ರೂ.26 ಲಕ್ಷದಷ್ಟು ವ್ಯವಹಾರ ನಡೆಸಿದೆ. ಮುರುಡೇಶ್ವರದಲ್ಲಿ ಶ್ರೀ ಮಹಾ ಮುರುಡೇಶ್ವರ ಸ್ವಸಹಾಯ ಗುಂಪಿನ ವತಿಯಿಂದ 2025ರ ಅಕ್ಟೋಬರ್ನಲ್ಲಿ ಆರಂಭವಾದ ಅಕ್ಕ ಕೆಫೆ ಇದುವರೆಗೆ ಸುಮಾರು ರೂ.18 ಲಕ್ಷದಷ್ಟು ವ್ಯವಹಾರ ನಡೆಸಿದೆ.
ಈ ಮಹಿಳೆಯರ ಉದ್ಯಮ ಕೇವಲ ಕೆಫೆಯ ನಾಲ್ಕು ಗೋಡೆಗಳೊಳಗೆ ನಿಂತಿಲ್ಲ. ಸರಸ್ ಮೇಳಗಳು ಇವರಿಗೆ ಮತ್ತೊಂದು ದೊಡ್ಡ ಮಾರುಕಟ್ಟೆಯ ಬಾಗಿಲು ತೆರೆದಿವೆ. ವಿವಿಧ ರಾಜ್ಯಗಳಲ್ಲಿ ನಡೆಯುವ ಸರಸ್ ಮೇಳಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಆಹಾರ ಉತ್ಪನ್ನಗಳಿಗೆ ಹೊಸ ಗ್ರಾಹಕರನ್ನು ಪರಿಚಯಿಸಿಕೊಂಡಿರುವ ಈ ಗುಂಪುಗಳು, ವ್ಯಾಪಾರವನ್ನು ಸ್ಥಳೀಯ ಮಟ್ಟದಿಂದ ಹೊರಗೂ ವಿಸ್ತರಿಸುವ ಅನುಭವ ಪಡೆದುಕೊಂಡಿವೆ.
ಇದೀಗ ಅಕ್ಕ ಕೆಫೆಯ ಹೆಜ್ಜೆಗಳು ಜಿಲ್ಲೆಯ ಮತ್ತಷ್ಟು ತಾಲೂಕುಗಳತ್ತ ಸಾಗಿವೆ. ಹೊನ್ನಾವರ, ಕುಮಟಾ, ಯಲ್ಲಾಪುರ ಹಾಗೂ ಶಿರಸಿ ತಾಲೂಕುಗಳಲ್ಲಿ ಅಕ್ಕ ಕೆಫೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿವೆ. ಅಂದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮೀಣ ಮಹಿಳೆಯರು ಉದ್ಯೋಗ ಹುಡುಕುವುದಕ್ಕಿಂತ ತಮ್ಮದೇ ಉದ್ಯಮ ಕಟ್ಟಿಕೊಳ್ಳುವ ಅವಕಾಶ ಪಡೆಯಲಿದ್ದಾರೆ.
ಕಾರವಾರದ ವೈದ್ಯಕೀಯ ಕಾಲೇಜು ಆವರಣ ಹಾಗೂ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿಯೂ ಅಕ್ಕ ಕೆಫೆ ಆರಂಭಿಸುವ ಉದ್ದೇಶದಿಂದ ರಾಜ್ಯ ಅಭಿಯಾನ ಘಟಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇವು ಕಾರ್ಯರೂಪಕ್ಕೆ ಬಂದರೆ ಸಾರ್ವಜನಿಕರಿಗೆ ಆಹಾರ ಸೇವೆಯ ಜೊತೆಗೆ ಮತ್ತಷ್ಟು ಮಹಿಳಾ ಸ್ವಸಹಾಯ ಗುಂಪುಗಳಿಗೆ ನಿರಂತರ ಆದಾಯದ ಅವಕಾಶವೂ ಸಿಗಲಿದೆ.
ಮುರುಡೇಶ್ವರದ ಅಕ್ಕ ಕೆಫೆಯಲ್ಲಿ ಕೆಲಸ ಮಾಡುತ್ತಿರುವ ಕಲಾ ಅವರ ಅನುಭವ ಈ ಬದಲಾವಣೆಯ ಮತ್ತೊಂದು ಮುಖವನ್ನು ತೆರೆದಿಡುತ್ತದೆ. ಐದು ಮಂದಿ ಸದಸ್ಯರ ತಂಡವಾಗಿ ಆರಂಭಿಸಿದ ಪ್ರಯತ್ನ ಇಂದು ಅವರಿಗೆ ಕೇವಲ ಆದಾಯದ ಮೂಲವಷ್ಟೇ ಅಲ್ಲ, ಆತ್ಮವಿಶ್ವಾಸವನ್ನು ಕಟ್ಟಿಕೊಟ್ಟಿದೆ.
“ಅಕ್ಕ ಕೆಫೆ ಆರಂಭವಾದ ನಂತರ ಆಹಾರ ತಯಾರಿಕೆ ಮತ್ತು ಮಾರಾಟದ ಜೊತೆಗೆ ಗ್ರಾಹಕರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡುವುದು, ಲೆಕ್ಕಪತ್ರ ನಿರ್ವಹಿಸುವುದು ಹಾಗೂ ಉದ್ಯಮವನ್ನು ವ್ಯವಸ್ಥಿತವಾಗಿ ನಡೆಸುವುದನ್ನೂ ಕಲಿತಿದ್ದೇವೆ. ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ವಿವಿಧೆಡೆ ನಡೆದ ಸರಸ್ ಮೇಳಗಳಲ್ಲಿ ಭಾಗವಹಿಸಿ ವ್ಯಾಪಾರದ ಅನುಭವವೂ ದೊರೆತಿದೆ” ಎಂದು ಅವರು ಹೇಳುತ್ತಾರೆ.
ಕೆಫೆಯಿಂದ ಪ್ರತೀ ತಿಂಗಳು ರೂ.1 ಲಕ್ಷಕ್ಕೂ ಅಧಿಕ ಆದಾಯ ಬರುತ್ತಿದ್ದು, ಕುಟುಂಬದ ಆರ್ಥಿಕ ಸ್ಥಿತಿಗೂ ಇದು ನೆರವಾಗಿದೆ. ಆದಾಯವನ್ನು ಕುಟುಂಬದ ಅಗತ್ಯಗಳಿಗೆ ಬಳಸುವುದರ ಜೊತೆಗೆ ಭವಿಷ್ಯಕ್ಕಾಗಿ ಉಳಿತಾಯ ಮಾಡುವ ವಿಶ್ವಾಸವೂ ಬಂದಿದೆ. ಗ್ರಾಹಕರ ಮೆಚ್ಚುಗೆ ಮತ್ತಷ್ಟು ಕೆಲಸ ಮಾಡುವ ಉತ್ಸಾಹ ನೀಡುತ್ತಿದೆ ಎನ್ನುತ್ತಾರೆ ಕಲಾ.
ಉತ್ತರ ಕನ್ನಡದ ಎಲ್ಲ ತಾಲೂಕುಗಳಿಗೂ ಅಕ್ಕ ಕೆಫೆ ವಿಸ್ತರಿಸುವ ಪ್ರಯತ್ನ ಇದೇ ದಿಕ್ಕಿನಲ್ಲಿ ಸಾಗುತ್ತಿದೆ. ಹೊಸ ಕೆಫೆಗಳು ಆರಂಭವಾದಂತೆ ಇನ್ನಷ್ಟು ಮಹಿಳೆಯರಿಗೆ ತಮ್ಮದೇ ಆದ ಆದಾಯದ ದಾರಿ ಸಿಗಲಿದೆ. ಸಣ್ಣ ಅವಕಾಶದಿಂದ ಆರಂಭವಾದ ಪ್ರಯತ್ನ ಮುಂದೆ ದೊಡ್ಡ ಉದ್ಯಮದ ರೂಪ ಪಡೆಯಬಹುದು.
ʻಮಹಿಳೆಯರ ಕೈಗೆ ಉದ್ಯೋಗ, ಉದ್ಯಮಕ್ಕೆ ಅವಕಾಶ, ಕುಟುಂಬಕ್ಕೆ ಆರ್ಥಿಕ ಭದ್ರತೆʼ ಎಂಬ ಆಶಯದೊಂದಿಗೆ ಸಾಗುತ್ತಿರುವ ಅಕ್ಕ ಕೆಫೆಗಳು ಮುಂದಿನ ದಿನಗಳಲ್ಲಿ ಉತ್ತರ ಕನ್ನಡದ ಗ್ರಾಮೀಣ ಮಹಿಳೆಯರ ಸ್ವಾವಲಂಬನೆಯ ಸಂಕೇತಗಳಾಗುವ ನಿರೀಕ್ಷೆಯಿದೆ.


