ಶಿರಸಿ: ಬಿಜೆಪಿಯ ‘ನಮ್ಮ ಮನೆ ನಮ್ಮ ಹಕ್ಕು’ ಹೋರಾಟಕ್ಕೆ ಮೊದಲ ಜಯ ದೊರೆತಿದ್ದು, ಕಾಂಗ್ರೆಸ್ ಸರ್ಕಾರವು ಆಗಸ್ಟ್ 13, 2026ರಂದು ಹೊರಡಿಸಿದ್ದ ಆದೇಶಕ್ಕೆ ಅಕ್ಟೋಬರ್ 8ರಂದು ತಾತ್ಕಾಲಿಕ ತಡೆ ನೀಡಿದೆ ಎಂದು ಜಾನ್ಮನೆ ಬಿಜೆಪಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾ.ಪಂ ಮಾಜಿ ಸದಸ್ಯ ನಾರಾಯಣ ಹೆಗಡೆ ಹಸೆಮನೆ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾತ್ಕಾಲಿಕ ತಡೆ ನೀಡುವುದಕ್ಕಿಂತ ಮೊದಲು ಇ-ಸ್ವತ್ತು 2.0 ನಿಯಮದಲ್ಲಿ ತಿದ್ದುಪಡಿ ತರಬೇಕಿತ್ತು. ಅರಣ್ಯ ಹಾಗೂ ಸರ್ಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ಅತಿಕ್ರಮಣ ಮಾಡಿಕೊಂಡು ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಕುಟುಂಬಗಳನ್ನು ನಿಯಮಾನುಸಾರ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಮತ್ತೆ ಸೇರ್ಪಡೆಗೊಳಿಸುವಂತೆ ವಿಧಾನಸಭೆಯಲ್ಲಿ ಚರ್ಚಿಸಿ ಸೂಕ್ತ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದ್ದಾರೆ.
ತಾತ್ಕಾಲಿಕ ತಡೆ ನೀಡುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ಸರ್ಕಾರ ಇ-ಸ್ವತ್ತು ವ್ಯವಸ್ಥೆಯನ್ನು ಸಂಪೂರ್ಣ ಸರಳೀಕರಣಗೊಳಿಸಿ, ಅರಣ್ಯ ಅಥವಾ ಸರ್ಕಾರಿ ಜಮೀನಿನಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದು ಗ್ರಾಮ ಪಂಚಾಯಿತಿಗೆ ನಿಯಮಿತವಾಗಿ ತೆರಿಗೆ ಪಾವತಿಸುತ್ತಿರುವ ಕುಟುಂಬಗಳನ್ನು ಮೊದಲ ಹಂತದಲ್ಲಿ ನಿಯಮಾನುಸಾರ ಅಧಿಕೃತಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ಇ-ಸ್ವತ್ತು ವ್ಯವಸ್ಥೆಯನ್ನು ಸರಳೀಕರಣಗೊಳಿಸಿ, ಜನರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವವರೆಗೆ ಭಾರತೀಯ ಜನತಾ ಪಕ್ಷದ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.


