ಸಿದ್ದಾಪುರ: ಮಳೆ ಕೊರತೆಯಿಂದ ಭತ್ತ ಸೇರಿದಂತೆ ಬೆಳೆಗಳು ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ಬೆಳೆ ಹಾನಿಗೊಳಗಾದ ರೈತರಿಗೆ ಎಕರೆಗೆ ರೂ.25 ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಒತ್ತಾಯಿಸಿದ್ದಾರೆ.
ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮದಲ್ಲಿ ಮಳೆ ಕೊರತೆಯಿಂದ ಹಾನಿಗೊಳಗಾದ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ಸರ್ಕಾರಕ್ಕೆ 15 ದಿನಗಳ ಗಡುವು ನೀಡುತ್ತಿದ್ದು, ಅಷ್ಟರೊಳಗೆ ಸಿದ್ದಾಪುರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ಬೆಳೆ ಹಾನಿಗೊಳಗಾದ ರೈತರಿಗೆ ಎಕರೆಗೆ ರೂ.25 ಸಾವಿರ ಪರಿಹಾರ ನೀಡುವಂತೆ ಆದೇಶಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಮಾತನಾಡಿ, ಮಳೆ ಕೊರತೆಯಿಂದ ಶಿರಳಗಿ ಭಾಗದಲ್ಲಿ ಭತ್ತದ ಗದ್ದೆಗಳು ನಾಟಿ ಮಾಡಿದ ಸ್ಥಿತಿಯಲ್ಲಿಯೇ ಉಳಿದಿವೆ. ಈ ಭಾಗದಲ್ಲಿ ಸುಮಾರು ಶೇ.90ರಷ್ಟು ರೈತರು ಭತ್ತದ ಕೃಷಿಯನ್ನೇ ಅವಲಂಬಿಸಿದ್ದಾರೆ. ಕೆಲವರು ಅಡಿಕೆ ಬೆಳೆಯುತ್ತಿದ್ದರೂ ಅಡಿಕೆ ಎಲೆ ಚುಕ್ಕಿ ರೋಗದ ಸಮಸ್ಯೆ ಎದುರಾಗಿದೆ ಎಂದರು.
ಕಂದಾಯ ಮತ್ತು ಕೃಷಿ ಇಲಾಖೆಗಳು ಜಂಟಿಯಾಗಿ ಬೆಳೆ ಹಾನಿಯ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಬೇಕು. ಸಣ್ಣ ರೈತರ ಸಮಸ್ಯೆಗಳತ್ತ ಸರ್ಕಾರ ಹಾಗೂ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅವರು ಹೆಚ್ಚಿನ ಗಮನ ಹರಿಸಿ, ಎಕರೆಗೆ ರೂ.25 ಸಾವಿರ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಿಮ್ಮಪ್ಪ ಮಡಿವಾಳ ಆಗ್ರಹಿಸಿದರು.
ಬಿಜೆಪಿ ರೈತ ಮೋರ್ಚಾ ಸಿದ್ದಾಪುರ ತಾಲೂಕಾಧ್ಯಕ್ಷ ನಾರಾಯಣ ಹೆಗಡೆ ಮಾತನಾಡಿ, ಸಿದ್ದಾಪುರವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವುದು ತುರ್ತು ಅಗತ್ಯವಾಗಿದೆ. ರೈತರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದು, ಸ್ಥಳೀಯ ಶಾಸಕರು ಈ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ, ಸರ್ಕಾರ ಹಾಗೂ ಶಾಸಕರು ಬರಪೀಡಿತ ತಾಲೂಕು ಘೋಷಣೆ ಮಾಡದಿದ್ದರೆ ಸಿದ್ದಾಪುರದ ರೈತರು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಮಂಜುನಾಥ್ ಭಟ್, ಸುರೇಶ ಬಾಲಿಕೊಪ್ಪ, ಶ್ರೀಕಾಂತ್ ಭಟ್, ಎಸ್.ಕೆ. ನಾಯ್ಕ, ಮುನಾವರ್, ಸುರೇಂದ್ರ ಗೌಡ, ಸಿ.ಆರ್. ನಾಯ್ಕ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ರೈತರು ಉಪಸ್ಥಿತರಿದ್ದರು.
‘ಸಿಂಗಾಪುರವಲ್ಲ, ರಸ್ತೆಗಳು ಸ್ವಿಮ್ಮಿಂಗ್ ಪೂಲ್ ಆಗಿವೆ’
ಶಾಸಕ ಭೀಮಣ್ಣ ನಾಯ್ಕ ಅವರು ಸಿದ್ದಾಪುರ ಕ್ಷೇತ್ರವನ್ನು ಸಿಂಗಾಪುರ ಮಾಡುತ್ತೇನೆ ಎನ್ನುವ ರೀತಿಯಲ್ಲಿ ಮಾತನಾಡಿದ್ದರು. ಸಿಂಗಾಪುರದ ಹೋಟೆಲ್ಗಳಲ್ಲಿ ಸ್ವಿಮ್ಮಿಂಗ್ ಪೂಲ್ಗಳಿರುತ್ತವೆ. ಆದರೆ ಸಿದ್ದಾಪುರದ ಹಳ್ಳಿಗಳ ಬಹುತೇಕ ರಸ್ತೆಗಳೇ ಸ್ವಿಮ್ಮಿಂಗ್ ಪೂಲ್ಗಳಂತಾಗಿವೆ. ಮೂರು ವರ್ಷಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವಾಗಿಲ್ಲ.
ಶಿವಕುಮಾರ ಶಿರಳಗಿ- ಶಿರಳಗಿ ಶಕ್ತಿ ಕೇಂದ್ರದ ಅಧ್ಯಕ್ಷ.