Friday, July 24, 2026
Join WhatsApp Group
HomeLocal Newsನಂದೊಳ್ಳಿ ಪ್ರೌಢಶಾಲೆಗೆ ʻಉತ್ತಮ ಎಸ್‌ಡಿಎಂಸಿʼ ಪ್ರಶಸ್ತಿಯ ಗರಿ

ನಂದೊಳ್ಳಿ ಪ್ರೌಢಶಾಲೆಗೆ ʻಉತ್ತಮ ಎಸ್‌ಡಿಎಂಸಿʼ ಪ್ರಶಸ್ತಿಯ ಗರಿ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಎಲ್ಲ ರೀತಿಯ ನೆರವು, ಅನುದಾನಗಳನ್ನು ನೀಡಿ ಶಿಕ್ಷಣ ಇಲಾಖೆ ಪ್ರೋತ್ಸಾಹಿಸುತ್ತಿದೆ. ಇದರ ಜೊತೆಗೇ ಪಾಲಕರ ಸಹಕಾರವೂ ಇರಬೇಕೆಂಬ ಉದ್ದೇಶದಿಂದ ರಚನೆಯಾಗಿದ್ದು ಶಾಲಾ ಅಭಿವೃದ್ಧಿ ಸಮಿತಿ. ಈ ಸಮಿತಿಯ ಸಹಕಾರದಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ.

ಸರಕಾರಿ ಶಾಲೆಗಳ ಎಸ್‌ಡಿಎಂಸಿ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯ ವಿದ್ಯಾವಾಹಿನಿ ಪೊರ್ಟಲ್‌ನಲ್ಲಿ ಮಾಹಿತಿ ದಾಖಲಿಸಲು ಅವಕಾಶ ನೀಡಿತ್ತು. ಪೋರ್ಟಲ್‌ನಲ್ಲಿ ದಾಖಲಾದ ಮಾಹಿತಿಗಳು, ಶಾಲಾ ಭೇಟಿ, ಪರಿಶೀಲನೆಯ ಆಧಾರದ ಮೇಲೆ 2025-26ನೇ ಸಾಲಿನ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಯಲ್ಲಾಪುರ ತಾಲೂಕಿನ ಗ್ರಾಮೀಣ ಪ್ರದೇಶವಾದ ನಂದೊಳ್ಳಿ ಸರಕಾರಿ ಪ್ರೌಢಶಾಲೆಯೂ ಆಯ್ಕೆಯಾಗಿ ಗಮನ ಸೆಳೆದಿದೆ. ಇದರೊಂದಿಗೆ, ಆನಗೋಡದ ಗೋಳಿಗದ್ದೆ ಹಾಗೂ ಭರತನಹಳ್ಳಿ ಶಾಲೆಗಳೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.

2022-23ನೇ ಸಾಲಿನಲ್ಲಿ ರಚನೆಯಾದ ಈ ಪ್ರೌಢಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳ, ಶಿಕ್ಷಕ ವೃಂದದ ಸಂಪೂರ್ಣ ಸಹಕಾರದೊಂದಿಗೆ ಇಂದು ಮಾದರಿ ಪ್ರೌಢಶಾಲೆಯಾಗಿ ಗುರುತಿಸಿಕೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶವನ್ನೂ ದಾಖಲಿಸುತ್ತ ಅಭಿವೃದ್ಧಿಯ ಪಥದಲ್ಲಿ ದಾಪುಗಾಲಿಟ್ಟಿದೆ.

ನಂದೊಳ‍್ಳಿ ಪ್ರೌಢಶಾಲೆ‍ಯ ಕಟ್ಟಡ ಹಳೆಯದಾಗಿದ್ದು, ಆಕರ್ಷಣೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ 2022-23ನೇ ಸಾಲಿನ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಬಾಲಚಂದ್ರ ಕೃಷ್ಣ ಭಟ್ಟ ಹೊಸಗಾಮಿ ಅವರ ಮುಂದಾಳತ್ವದಲ್ಲಿ ಸರಕಾರದ ಅನುದಾನವನ್ನು ನಿರೀಕ್ಷಿಸದೇ ಸಮಿತಿಯ ಸದಸ್ಯರ ಸಹಕಾರದಿಂದ ಮುಖ್ಯದ್ವಾರಕ್ಕೆ ಬಣ್ಣ ಬಳಿದು ಶಾಲೆಯ ಹೆಸರನ್ನು ಅಚ್ಚಾಗಿ ಮೂಡಿಸಿ ಆವರಣದ ಗೊಡೆಗೆ ಬಣ್ಣ ಬಳಿದು, ಊರಿನ ಪ್ರಾರಂಭದಲ್ಲಿಯೇ ಇರುವ ಪ್ರೌಢಶಾಲೆಯನ್ನು ಸಾರ್ವಜನಿಕರು ಗಮನಿಸುವ ಹಾಗೆ ರೂಪಿಸಿದರು.

ಶಾಲೆಯ ಕಛೇರಿಗೆ ಹಾಗೂ ಶಿಕ್ಷಕರ ಕೊಠಡಿಗೆ ಟೈಲ್ಸ್‌ ಅಳವಡಿಸಿ, ಸುಣ್ಣ-ಬಣ್ಣದೊಂದಿಗೆ ಇನ್ನಷ್ಟು ಆಕರ್ಷಣೀಯವಾಗಿಸಿದರು. ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಊಟದ ಆವಾರವನ್ನು ನಿರ್ಮಿಸಿದರು. ಇದರೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಎಲ್ಲ ಸದಸ್ಯರ ಸಹಕಾರದೊಂದಿಗೆ ನಿರ್ಮಿಸಿದರು.

ಇವರ ಅವಧಿಯಲ್ಲಿ ಶಾಲೆಯ ದಾಖಲಾತಿ ಶೇ. 40ರಷ್ಟು ಹೆಚ್ಚಾಗಿದೆ. ಎಲ್ಲಾ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಕಳೆದ ವರ್ಷದ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು ಎಲ್ಲಾ ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಒಟ್ಟಿನಲ್ಲಿ, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಸ್‌ಡಿಎಂಸಿಯ ಕೊಡುಗೆ ಅಪಾರವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಮುಂದಾಗುತ್ತಿರುವ ಸಂದರ್ಭದಲ್ಲಿ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ, ತಮ್ಮೂರಿನ ಶಾಲೆ ಅಭಿವೃದ್ಧಿ ಹೊಂದಬೇಕೆಂಬ ಏಕೈಕ ಉದ್ದೇಶದಿಂದ ಕಾರ್ಯ ನಿರ್ವಹಿಸಿದ, ನಿರ್ವಹಿಸುತ್ತಿರುವ ಪದಾಧಿಕಾರಿಗಳ ಕೊಡುಗೆ ಹಿರಿದು ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಹೆಗಡೆ ಹಾಗೂ ಸಹ ಶಿಕ್ಷಕರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share