Thursday, October 22, 2026
HomeLocal Newsಸಂಸದ ಕಾಗೇರಿಯವರೂ ಕೇಂದ್ರ ಮಟ್ಟದಲ್ಲಿ ಕಾನೂನು ತಿದ್ದುಪಡಿಗೆ ಪ್ರಯತ್ನಿಸಲಿ

ಸಂಸದ ಕಾಗೇರಿಯವರೂ ಕೇಂದ್ರ ಮಟ್ಟದಲ್ಲಿ ಕಾನೂನು ತಿದ್ದುಪಡಿಗೆ ಪ್ರಯತ್ನಿಸಲಿ

ಯಲ್ಲಾಪುರ: ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿರುವ ಆಸ್ತಿಗಳ ತೆರಿಗೆ ಮತ್ತು ಇ-ಸ್ವತ್ತು 2.0 ತಂತ್ರಾಂಶಕ್ಕೆ ಸಂಬಂಧಿಸಿದ ಸುತ್ತೋಲೆಗೆ ತಡೆ ನೀಡಿರುವುದನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘ಕೇವಲ ಕಣ್ಣೊರೆಸುವ ತಂತ್ರ’ ಎಂದು ಟೀಕಿಸಿರುವುದಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನರ ಸಮಸ್ಯೆಗೆ ತಾತ್ಕಾಲಿಕ ಕ್ರಮವಷ್ಟೇ ಅಲ್ಲ, ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಹೆಬ್ಬಾರ್, ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಆದೇಶದಿಂದ ಜನರಿಗೆ ಎದುರಾಗಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕಾನೂನು ರೂಪಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಮನೆಯ ಹಕ್ಕಿನ ಬಗ್ಗೆ ಮಾತನಾಡುವ ಸಂಸದ ಕಾಗೇರಿ ಅವರು ಬಡ ಮತದಾರರ ಹಕ್ಕುಗಳ ಬಗ್ಗೆಯೂ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಹೆಬ್ಬಾರ್, ತೆರಿಗೆ ಸಂಗ್ರಹದ ಆದೇಶದಿಂದ ಜನರಿಗೆ ಉಂಟಾಗುತ್ತಿರುವ ತೊಂದರೆ ನಿವಾರಣೆಗೆ ಸೂಕ್ತ ಕಾನೂನು ರೂಪಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಅತಿಕ್ರಮಣದಾರರಿಗೆ ಭೂಮಿ ಮಂಜೂರು ಮಾಡುವ ವಿಚಾರದಲ್ಲಿ ಆಸ್ತಿ ವಾರಸುದಾರಿಕೆಗೆ ಸಂಬಂಧಿಸಿದ ಮೂರು ತಲೆಮಾರುಗಳ ಮಾನದಂಡವನ್ನು ಒಂದು ತಲೆಮಾರಿಗೆ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಾನೂನು ತಿದ್ದುಪಡಿಗೆ ಸಂಸದ ಕಾಗೇರಿ ಪ್ರಯತ್ನಿಸಬೇಕು. ಲೋಕಸಭೆಯ ಅಧಿವೇಶನದಲ್ಲಿ ಈ ವಿಚಾರವಾಗಿ ಧ್ವನಿ ಎತ್ತುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಹಾಗೂ ಹೋರಾಟಗಾರ ರವೀಂದ್ರ ನಾಯ್ಕ ಅವರೂ ಸುತ್ತೋಲೆಗೆ ತಾತ್ಕಾಲಿಕ ತಡೆ ನೀಡುವುದಷ್ಟೇ ಸಾಕಾಗುವುದಿಲ್ಲ, ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿರುವುದಾಗಿ ಶಾಸಕ ಹೆಬ್ಬಾರ್ ಉಲ್ಲೇಖಿಸಿದ್ದಾರೆ. ಈ ವಿಚಾರವನ್ನು ತಾವು ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಜನರಿಗೆ ತೊಂದರೆಯಾಗದಂತೆ ಅಗತ್ಯ ಕಾನೂನು ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಂಸದ ಕಾಗೇರಿ ಅವರು ಕಾನೂನು ತಿದ್ದುಪಡಿಗೆ ಪ್ರಯತ್ನಿಸಲಿ. ರಾಜ್ಯ ಸರ್ಕಾರದ ಮಟ್ಟದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಇಬ್ಬರೂ ಒಟ್ಟಾಗಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ ಎಂದು ಶಾಸಕ ಹೆಬ್ಬಾರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share