ಗೋಕರ್ಣ: ಚಿನ್ನಾಭರಣದ ವಿಚಾರವಾಗಿ ನಡೆದ ವಾಗ್ವಾದದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಆರೋಪದಡಿ ನಾಲ್ವರ ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾ ತಾಲೂಕಿನ ಬೆಲೆಕೇರಿ ನಿವಾಸಿ ಸಂತೋಷ ಚಂದ್ರಕಾಂತ ರೇವಣಕರ್ ಅವರು ನೀಡಿದ ಖಾಸಗಿ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಅಕ್ಟೋಬರ್ 3ರಂದು ಸಂತೋಷ ರೇವಣಕರ್ ಅವರು ತಮ್ಮ ಅತ್ತೆಯ ಮರಣದ 12ನೇ ದಿನದ ಕಾರ್ಯಕ್ರಮದ ನಿಮಿತ್ತ ಗೋಕರ್ಣದ ದಿವಾಕರ ಭಟ್ ಅವರ ಮನೆಗೆ ಬಂದಿದ್ದರು.
ಈ ಸಂದರ್ಭದಲ್ಲಿ ಅವರ ನಾದಿನಿ ರೇಷ್ಮಾ ಮೋಹನ ಕುರ್ಡೇಕರ್ ಅವರು ತಮ್ಮ ಅತ್ತೆಯ ಬಳಿ 600 ಗ್ರಾಂ ಚಿನ್ನಾಭರಣ ಇಟ್ಟಿದ್ದ ವಿಚಾರ ಪ್ರಸ್ತಾಪವಾಗಿದೆ. ಆಭರಣವನ್ನು ಸವಿತಾ ಅರುಣ ರಾಯ್ಕರ್ ಅವರ ಬಳಿ ಕೇಳಿದಾಗ, ತಮಗೆ ಯಾವುದೇ ಚಿನ್ನಾಭರಣ ನೀಡಿರುವುದು ಗೊತ್ತಿಲ್ಲ, ತಮ್ಮ ಬಳಿ ಅವರ ಚಿನ್ನಾಭರಣ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ನಂತರ ಮಾತನಾಡೋಣ ಎಂದು ಸಂತೋಷ ರೇವಣಕರ್ ಹಾಗೂ ಅವರ ಕುಟುಂಬದವರು ಹೊರಡುತ್ತಿದ್ದಾಗ, ಲತಾ ಶಿವರಾಮ ಶೇಟ್, ಸ್ಮಿತಾ ರಾಘವೇಂದ್ರ ಕುರ್ಡೇಕರ್, ಸೂರಜ್ ರಾಘವೇಂದ್ರ ಕುರ್ಡೇಕರ್ ಹಾಗೂ ರೀನಾ ರಾಜೀವ ರಾಯ್ಕರ್ ಅವರು ಏಕಾಏಕಿ ಹಲ್ಲೆ ನಡೆಸಿದ್ದಲ್ಲದೆ, ಚಿನ್ನಾಭರಣದ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಸಲಾದ ಖಾಸಗಿ ದೂರಿನ ಆಧಾರದಲ್ಲಿ ಮುಂದಿನ ಪೊಲೀಸ್ ತನಿಖೆ ನಡೆಯಬೇಕಿದೆ.