ಐದು ತಾಸಿನಲ್ಲಿ ಗೋವಾ ತಲುಪಿದ ಬೈಕ್; 12 ತಾಸಿನಲ್ಲಿ ಮಾಲೀಕನ ಕೈಗೆ!
ಯಲ್ಲಾಪುರ: ಮಧ್ಯಾಹ್ನ ಊಟಕ್ಕೆ ಹೋದಾಗ ಹೋಟೆಲ್ ಎದುರು ನಿಲ್ಲಿಸಿದ್ದ ಬೈಕ್ ನಾಪತ್ತೆ! ಎಲ್ಲಿ ಹುಡುಕಿದರೂ ಪತ್ತೆಯಿಲ್ಲ. ಕೊನೆಗೆ ಪೊಲೀಸ್ ಠಾಣೆಯೇ ದಾರಿ. ಆದರೆ, ಕಳುವಾದ ಬೈಕ್ ಮರಳಿ ಸಿಗಲು ದಿನಗಟ್ಟಲೆ ಕಾಯಬೇಕಾಗಲಿಲ್ಲ. ಬೈಕ್ ಕದ್ದವನು ಐದೇ ತಾಸಿನಲ್ಲಿ ಗೋವಾ ತಲುಪಿದ್ದರೆ, ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಕೇವಲ 12 ತಾಸಿನೊಳಗೆ ಬೈಕ್ ಅನ್ನು ಅದರ ಮಾಲೀಕನ ಕೈಗೆ ತಲುಪಿಸಿದ್ದಾರೆ!
ಇದು ಯಾವುದೋ ಸಿನಿಮಾದ ಕಥೆಯಲ್ಲ, ಯಲ್ಲಾಪುರದಲ್ಲಿ ನಡೆದ ನೈಜ ಘಟನೆ. ಕಳ್ಳತನದ ಪ್ರಕರಣವೊಂದರ ತನಿಖೆಯ ಜೊತೆಗೆ ಪೊಲೀಸ್ ಇಲಾಖೆಯ ಕರ್ತವ್ಯಪ್ರಜ್ಞೆ, ದಕ್ಷತೆ ಮತ್ತು ಮಾನವೀಯ ಮುಖವನ್ನೂ ಪರಿಚಯಿಸುವ ಘಟನೆ ಇದು.
ಯಲ್ಲಾಪುರ ತಾಲೂಕಿನ ಗ್ರಾಮೀಣ ಪ್ರದೇಶದ ನಿವಾಸಿ ಪ್ರಮೋದ್ ಹೆಗಡೆ ಅವರು ಪಟ್ಟಣದ ಹೋಟೆಲ್ ಒಂದರ ಎದುರು ತಮ್ಮ ಬೈಕ್ ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ವಾಪಸ್ ಬಂದಾಗ ಬೈಕ್ ನಿಲ್ಲಿಸಿದ್ದ ಜಾಗ ಖಾಲಿ! ಅಲ್ಲಿ ಇಲ್ಲಿ ಹುಡುಕಾಡಿದರೂ ಸುಳಿವಿಲ್ಲ. ಪರಿಚಯದವರನ್ನು ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ನಡೆದ ಘಟನೆಯನ್ನು ಯಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ತಿಳಿಸಿದರು.
ದೂರು ಬಂದ ತಕ್ಷಣ ಪೊಲೀಸರು ಬೈಕ್ ಕಳವಾದ ಘಟನೆಯ ಜಾಡು ಹಿಡಿದರು. ತನಿಖೆ ಮುಂದುವರಿದಂತೆ ಬೈಕ್ ಕದ್ದ ವ್ಯಕ್ತಿಯ ಚಲನವಲನದ ಸುಳಿವು ಸಿಕ್ಕಿತ್ತು. ಅಚ್ಚರಿಯ ಸಂಗತಿಯೆಂದರೆ, ಬೈಕ್ ಕದ್ದವನು ಅದನ್ನು ತೆಗೆದುಕೊಂಡು ಅಷ್ಟರಲ್ಲಾಗಲೇ ಗೋವಾ ತಲುಪಿದ್ದ. ಅಲ್ಲಿ ಬೈಕ್ ಅನ್ನು ಎಲ್ಲೋ ನಿಲ್ಲಿಸಿ ವಾಪಸ್ ಬಂದಿದ್ದ. ಒಂದು ಊರಿನಿಂದ ಮತ್ತೊಂದು ರಾಜ್ಯಕ್ಕೆ ಬೈಕ್ ತಲುಪಿದರೂ, ಪೊಲೀಸರು ಪ್ರಕರಣವನ್ನು ಕೈಬಿಡದೆ ಪತ್ತೆ ಕಾರ್ಯ ಮುಂದುವರಿಸಿದರು.
ಪೊಲೀಸರ ಪ್ರಯತ್ನಕ್ಕೆ ಫಲ ಸಿಕ್ಕಿತು. ಘಟನೆ ನಡೆದ ಕೇವಲ 12 ತಾಸಿನೊಳಗೆ ಕಳುವಾಗಿದ್ದ ಬೈಕ್ ಮತ್ತೆ ಅದರ ಮೂಲ ವಾರಸುದಾರ ಪ್ರಮೋದ್ ಹೆಗಡೆ ಅವರ ಎದುರಿಗಿತ್ತು. ಬೈಕ್ ಕಳವಾದಾಗ ಉಂಟಾಗಿದ್ದ ಆತಂಕಕ್ಕೆ ತೆರೆ ಬಿದ್ದಿತ್ತು. ಕಳೆದುಹೋದ ವಾಹನ ಮರಳಿ ಸಿಕ್ಕ ಸಂತೋಷ ಒಂದೆಡೆಯಾದರೆ, ಅಲ್ಪಾವಧಿಯಲ್ಲೇ ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸರ ಕಾರ್ಯವೈಖರಿ ಪ್ರಮೋದ್ ಅವರಲ್ಲಿ ಮೆಚ್ಚುಗೆ ಮೂಡಿಸಿತ್ತು.
ಈ ಪ್ರಕರಣದಲ್ಲಿ ಮತ್ತೊಂದು ಸೂಕ್ಷ್ಮ ಸಂಗತಿಯೂ ಇತ್ತು. ಬೈಕ್ ಕಳವು ಮಾಡಿದ್ದ ವ್ಯಕ್ತಿ ಸ್ಥಳೀಯನೇ ಆಗಿದ್ದು, ಮಾನಸಿಕವಾಗಿ ತುಸು ಅಸ್ವಸ್ಥನಾಗಿದ್ದ ಎಂಬುದು ನಂತರ ತಿಳಿದುಬಂದಿದೆ. ಆತ ಬೈಕನ್ನು ಯಾರಿಗೋ ಸಿಕ್ಕ ದರಕ್ಕೆ ಮಾರಿಲ್ಲ, ಗುಜರಿಗೆ ಹಾಕಿ ಕಿಸೆಗೊಂದಿಷ್ಟು ಹಣ ಇಳಿಸಿ ಪರಾರಿಯೂ ಆಗಿಲ್ಲ. ಹೀಗಾಗಿ, ಪ್ರಕರಣ ದಾಖಲಿಸದೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಕಳುವಾದ ವಾಹನವನ್ನು ಪತ್ತೆಹಚ್ಚುವುದು ಪೊಲೀಸರ ಕರ್ತವ್ಯವಾದರೆ, ಘಟನೆಯ ಎಲ್ಲ ಆಯಾಮಗಳನ್ನು ಅರಿತು ಸೂಕ್ತವಾಗಿ ನಡೆದುಕೊಳ್ಳುವುದೂ ಅಷ್ಟೇ ಮುಖ್ಯ.
ಪ್ರಕರಣದ ಆರಂಭದಿಂದ ಬೈಕ್ ಮರಳಿ ಸಿಗುವವರೆಗೂ ಯಲ್ಲಾಪುರ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ತೋರಿದ ಸ್ನೇಹಪರ ವರ್ತನೆ, ಕಾಳಜಿ ಹಾಗೂ ಸ್ಪಂದನೆಗೆ ಪ್ರಮೋದ್ ಹೆಗಡೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸರಲ್ಲೂ ಮಾನವೀಯತೆ ಇದೆ ಎಂಬುದಕ್ಕೆ ಯಲ್ಲಾಪುರದ ಪೊಲೀಸ್ ಸಿಬ್ಬಂದಿಯೇ ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೈಕ್ ಕಳುವು ಮಾಡಿದ್ದ ವ್ಯಕ್ತಿಯ ಹಿನ್ನೆಲೆ, ಕೌಟುಂಬಿಕ ಪರಿಸ್ಥಿತಿಯನ್ನು ಅರಿತು ದೂರು ದಾಖಲಿಸಲಿಲ್ಲ ಎಂದೂ ಪ್ರಮೋದ್ ಹೆಗಡೆ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರುವ ಸಂದರ್ಭ ಬಂದರೆ, ದೂರು ಕೊಟ್ಟ ಬಳಿಕ ಏನಾಗಬಹುದು ಎಂಬ ಆತಂಕ ಅನೇಕರಲ್ಲಿರುತ್ತದೆ. ಕೆಲವೊಮ್ಮೆ ಪ್ರಕರಣದ ವಿಚಾರಣೆ, ದಾಖಲೆಗಳು ಮತ್ತು ಮುಂದಿನ ಕ್ರಮಗಳ ಬಗ್ಗೆ ಸ್ಪಷ್ಟ ಮಾಹಿತಿ ಸಿಗದಿದ್ದರೆ ಆ ಆತಂಕ ಮತ್ತಷ್ಟು ಹೆಚ್ಚುತ್ತದೆ. ಇಂತಹ ಸಂದರ್ಭದಲ್ಲಿ ದೂರುದಾರರೊಂದಿಗೆ ಸೌಜನ್ಯದಿಂದ ಮಾತನಾಡಿ, ಅವರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಾಧ್ಯವಾದಷ್ಟು ಬೇಗ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವ ಪೊಲೀಸ್ ಸಿಬ್ಬಂದಿಯ ನಡೆ ಜನರಲ್ಲಿ ವಿಶ್ವಾಸ ಮೂಡಿಸುತ್ತದೆ.
ರಾಜಕೀಯ ಒತ್ತಡ ಅಥವಾ ಇತರ ಪ್ರಭಾವಗಳಿಗೆ ಒಳಗಾಗದೆ ಪೊಲೀಸರು ತಮ್ಮ ಕರ್ತವ್ಯವನ್ನು ಸ್ವತಂತ್ರವಾಗಿ ನಿರ್ವಹಿಸಬೇಕು ಎಂಬ ನಿರೀಕ್ಷೆ ಜನರಲ್ಲಿದೆ. ಅದೇ ರೀತಿ, ಪೊಲೀಸ್ ಇಲಾಖೆಯ ಮೇಲಿನ ಜನರ ವಿಶ್ವಾಸ ಹೆಚ್ಚಬೇಕಾದರೆ ದಕ್ಷತೆಯ ಜತೆಗೆ ಪ್ರಾಮಾಣಿಕತೆ, ಸೌಜನ್ಯ ಮತ್ತು ಮಾನವೀಯ ಸ್ಪಂದನೆಯೂ ಅಗತ್ಯ. ಯಲ್ಲಾಪುರದ ಈ ಘಟನೆ ಅಂತಹ ನಿರೀಕ್ಷೆಗಳನ್ನು ನೆನಪಿಸುತ್ತದೆ.
ಕರ್ತವ್ಯವನ್ನು ಮಾನವೀಯತೆಯೊಂದಿಗೆ ನಿರ್ವಹಿಸಿದಾಗ ಪೊಲೀಸ್ ಠಾಣೆ ಕೇವಲ ದೂರು ದಾಖಲಿಸುವ ಸ್ಥಳವಾಗಿ ಉಳಿಯುವುದಿಲ್ಲ, ಸಂಕಷ್ಟದಲ್ಲಿರುವವರಿಗೆ ಭರವಸೆ ನೀಡುವ ವ್ಯವಸ್ಥೆಯಾಗುತ್ತದೆ ಎಂಬುದನ್ನು ಯಲ್ಲಾಪುರದ ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಈ ಸೌಜನ್ಯಯುತ ವಾತಾವರಣ ಹೀಗೆಯೇ ಮುಂದುವರೆಯಲಿ ಎಂಬುದು ʻಕೆನರಾ ನೆಕ್ಸ್ಟ್ʼ ಆಶಯ.