ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
ಗೋಕರ್ಣ ಕಡಲತೀರದ ತ್ಯಾಜ್ಯ ವಿಲೇವಾರಿ ಹಾಗೂ ಹೊನ್ನಾವರ, ಕಾಸರಕೋಡು ಮತ್ತು ತದಡಿ ಭಾಗಗಳ ಪ್ರವಾಸಿ ಬೋಟಿಂಗ್ ಅನುಮತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ಅಥವಾ ನಿಯಮಬಾಹಿರ ಕ್ರಮ ನಡೆದಿಲ್ಲ. ನಿಗದಿತ ನಿಯಮಗಳು, ತಾಂತ್ರಿಕ ಪರಿಶೀಲನೆ ಮತ್ತು ಸಮಿತಿಗಳ ಅನುಮೋದನೆಯಂತೆ ಕಾರ್ಯನಿರ್ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಗೋಕರ್ಣ ಮುಖ್ಯ ಕಡಲತೀರದಲ್ಲಿ ಇಲಾಖೆಯ ಸ್ವಚ್ಛತಾ ಸಿಬ್ಬಂದಿ ಪ್ರತಿದಿನ ಕಸ ಸಂಗ್ರಹಿಸುತ್ತಾರೆ. ಆರಂಭದಲ್ಲಿ ಪ್ರತ್ಯೇಕ ಕಸದ ಬುಟ್ಟಿಗಳಿಲ್ಲದ ಕಾರಣ ಕಸವನ್ನು ಬಟ್ಟೆಗಳಲ್ಲಿ ಪ್ರತ್ಯೇಕವಾಗಿ ಕಟ್ಟಿ, ಗ್ರಾಮ ಪಂಚಾಯಿತಿ ಸೂಚಿಸಿದ ಸ್ಥಳದಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದರೆ ಪಂಚಾಯಿತಿಯ ತ್ಯಾಜ್ಯ ಸಂಗ್ರಹಣಾ ವಾಹನ ಎಂಟರಿಂದ ಹತ್ತು ದಿನಗಳಿಗೊಮ್ಮೆ ಬರುತ್ತಿದ್ದರಿಂದ ವಿಲೇವಾರಿಯಲ್ಲಿ ತೊಂದರೆಯಾಗುತ್ತಿತ್ತು.
ಈ ಸಮಸ್ಯೆ ಪರಿಹರಿಸಲು ಸುಮಾರು ಒಂದು ತಿಂಗಳ ಹಿಂದೆ ಐದು ದೊಡ್ಡ ಕಸದ ಬುಟ್ಟಿಗಳನ್ನು ಒದಗಿಸಲಾಗಿದೆ. ಬಳಿಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ವಾಹನದ ನಿರ್ವಾಹಕರು ಹಿಂದಿನಂತೆ ಕಸವನ್ನು ಬಟ್ಟೆಗಳಲ್ಲಿ ಕಟ್ಟಿ ಲೈಫ್ಗಾರ್ಡ್ಗಳ ವಾಚ್ಟವರ್ ಕೆಳಗೆ ಇಡುವಂತೆ ಸೂಚಿಸಿದ್ದಾರೆ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಕಡಲತೀರದ ಸ್ವಚ್ಛತಾ ಕಾರ್ಯ ನಿಯಮಿತವಾಗಿ ನಡೆಯುತ್ತಿದ್ದು, ಸಿಬ್ಬಂದಿಯ ದೈನಂದಿನ ಕಾರ್ಯಗಳ ಜಿಪಿಎಸ್ ಛಾಯಾಚಿತ್ರಗಳನ್ನೂ ಸಂಗ್ರಹಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಹೊನ್ನಾವರ ಮತ್ತು ಕಾಸರಕೋಡು ಭಾಗಗಳಲ್ಲಿ ಪ್ರವಾಸಿ ಬೋಟಿಂಗ್ ಅನುಮತಿಗಾಗಿ ಸಲ್ಲಿಕೆಯಾಗಿದ್ದ ಒಟ್ಟು 155 ಅರ್ಜಿಗಳಲ್ಲಿ ಹೊನ್ನಾವರದ 110 ಹಾಗೂ ಕಾಸರಕೋಡಿನ 45 ಅರ್ಜಿಗಳನ್ನು ತಾಂತ್ರಿಕ ಸಮಿತಿಯ ಅಧ್ಯಕ್ಷರಾದ ಹೊನ್ನಾವರ ತಹಶೀಲ್ದಾರರ ಮೂಲಕ ಪರಿಶೀಲಿಸಲಾಗಿದೆ.
ಅಗತ್ಯ ದಾಖಲೆಗಳನ್ನು ಹೊಂದಿದ್ದ ಅರ್ಜಿಗಳ ಕುರಿತು ಸಹಾಯಕ ಆಯುಕ್ತರ ವರದಿಯೊಂದಿಗೆ ಮಾಹಿತಿ ಸಲ್ಲಿಸಲಾಗಿತ್ತು. ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಅನುಮೋದನೆಯಂತೆ ಅನುಮತಿ ಪಡೆದ ಬೋಟುಗಳಿಗೆ ವಾರ್ಷಿಕ 20 ಸಾವಿರ ರೂ. ಶುಲ್ಕ ನಿಗದಿಪಡಿಸಿ, ಮಾರ್ಚ್ 2026ರಿಂದ ಮಾರ್ಚ್ 2027ರವರೆಗಿನ ಅವಧಿಗೆ ಅನುಮತಿಪತ್ರಗಳನ್ನು ನೀಡಲಾಗಿದೆ.
ಬೋಟಿಂಗ್ ಕಾರ್ಯಾಚರಣೆಯನ್ನು ವ್ಯವಸ್ಥಿತಗೊಳಿಸಲು ಸಾಫ್ಟ್ವೇರ್ ಅಭಿವೃದ್ಧಿಪಡಿಸಿ, ಕಂಪ್ಯೂಟರ್ ಮತ್ತು ಪ್ರಿಂಟರ್ ಖರೀದಿಸಲಾಗಿದೆ. ಪರಿಣತಿ ಹೊಂದಿರುವ ಸಿಬ್ಬಂದಿಯನ್ನು ನಿಯೋಜಿಸಿ, ಕಾಸರಕೋಡಿನಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಹಳೆಯ ಕಟ್ಟಡದಲ್ಲಿ ತಾತ್ಕಾಲಿಕ ಕೌಂಟರ್ ಆರಂಭಿಸಲಾಗಿದೆ.
ಗಣಕೀಕೃತ ವ್ಯವಸ್ಥೆಗೆ ಬೋಟ್ ಮಾಲೀಕರು ಮತ್ತು ಪ್ರವಾಸಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಇಲಾಖೆ ಹೇಳಿದೆ. ಅನುಮತಿಯಿಲ್ಲದ ಬೋಟುಗಳ ಕಾರ್ಯಾಚರಣೆಗೆ ಇಲಾಖೆ ಬೆಂಬಲ ನೀಡುವುದಿಲ್ಲ. ಈ ಕುರಿತು ಸ್ಥಳಕ್ಕೆ ಹಲವು ಬಾರಿ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ತಿಳಿಸಿದೆ.
ತದಡಿ ಭಾಗದಲ್ಲಿ ಪ್ರವಾಸಿ ಬೋಟಿಂಗ್ ಅನುಮತಿಗಾಗಿ 31 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಕುಮಟಾ ತಹಶೀಲ್ದಾರರ ತಾಂತ್ರಿಕ ಸಮಿತಿಗೆ ಕಳುಹಿಸಲಾಗಿತ್ತು. ಈ ಹಿಂದೆ ಜೇತನಾ ಸಂಸ್ಥೆ ನಡೆಸಿದ ಕಾರ್ಯಸಾಧ್ಯತಾ ಸಮೀಕ್ಷೆಯು ಗರಿಷ್ಠ 20 ಬೋಟುಗಳಿಗೆ ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿತ್ತು.
ಇದರ ಆಧಾರದ ಮೇಲೆ ಜಿಲ್ಲಾ ಮಟ್ಟದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು 20 ಬೋಟುಗಳಿಗೆ ಅನುಮತಿ ನೀಡಲು ಒಪ್ಪಿಗೆ ಸೂಚಿಸಿದ್ದರು. ಮೊದಲ ಹಂತದಲ್ಲಿ ಅಗತ್ಯ ದಾಖಲೆಗಳನ್ನು ಹೊಂದಿದ್ದ ಆರು ಅರ್ಜಿಗಳನ್ನು ಉಪವಿಭಾಗಾಧಿಕಾರಿಗಳ ಶಿಫಾರಸಿನೊಂದಿಗೆ ಜಿಲ್ಲಾ ಪ್ರವಾಸೋದ್ಯಮ ಕಚೇರಿಗೆ ಕಳುಹಿಸಲಾಗಿತ್ತು.
ಸಮಿತಿಯ ಅನುಮೋದನೆಯಂತೆ ಪ್ರತಿ ಬೋಟಿಗೆ 30 ಸಾವಿರ ರೂ. ಶುಲ್ಕ ವಿಧಿಸಿ, ಡಿಸೆಂಬರ್ 17, 2025ರಿಂದ ಡಿಸೆಂಬರ್ 16, 2026ರವರೆಗೆ ಅನುಮತಿ ನೀಡಲಾಗಿದೆ. ನಂತರದ ಹಂತಗಳಲ್ಲಿ ಸಲ್ಲಿಕೆಯಾದ ನಾಲ್ಕು, ಒಂಬತ್ತು ಮತ್ತು ಒಂದು ಅರ್ಜಿಗಳನ್ನೂ ಪರಿಶೀಲನೆ ಹಾಗೂ ಅನುಮೋದನಾ ಪ್ರಕ್ರಿಯೆಯಂತೆ ಪರಿಗಣಿಸಿ ಅನುಮತಿ ನೀಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇಲಾಖೆಯ ಕಾರ್ಯಚಟುವಟಿಕೆಗಳ ಕುರಿತು ಆಧಾರರಹಿತ ಆರೋಪಗಳನ್ನು ಮಾಡದಂತೆ ಉಪ ನಿರ್ದೇಶಕರು ಮನವಿ ಮಾಡಿದ್ದಾರೆ.


