Ad
Ad
Ad
Home Local News ಯಕ್ಷಗಾನ ಮನೆ-ಮನದ ಕಲೆಯಾಗಲಿ: ಶ್ರೀ ಮಾರುತಿ ಗುರೂಜಿ

ಯಕ್ಷಗಾನ ಮನೆ-ಮನದ ಕಲೆಯಾಗಲಿ: ಶ್ರೀ ಮಾರುತಿ ಗುರೂಜಿ

0
11

ಬಂಗಾರಮಕ್ಕಿ: ಭಾಷೆ ಮತ್ತು ಸಂಸ್ಕೃತಿಯ ಉಳಿವಿನಲ್ಲಿ ಯಕ್ಷಗಾನದ ಪಾತ್ರ ಮಹತ್ವದ್ದಾಗಿದ್ದು, ಅದರ ಕಥನಗಳ ಸಾರವನ್ನು ಅರಿತು ಕಲೆಯನ್ನು ಪ್ರತಿಯೊಬ್ಬರೂ ತಮ್ಮ ಮನೆ-ಮನದ ಭಾಗವಾಗಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಕರೆ ನೀಡಿದರು.

Ad

ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ಮತ್ತು ಸಿಲೆಕ್ಟ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿರುವ ‘ಯಕ್ಷ ಪೂರ್ಣಿಮೆ–2026’ ಯಕ್ಷಗಾನ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷಗಾನವನ್ನು ಕೇವಲ ಮನರಂಜನೆಯ ಕಲೆಯಾಗಿ ನೋಡದೆ, ಅದರಲ್ಲಿರುವ ಕಥೆಗಳ ಸಾರ ಹಾಗೂ ಸಾಂಪ್ರದಾಯಿಕ ಮೌಲ್ಯಗಳನ್ನು ಅರಿತು ಗೌರವಿಸಬೇಕು. ಕಲಾವಿದರು ಇತರರನ್ನು ಅನುಕರಿಸುವುದಕ್ಕಷ್ಟೇ ಸೀಮಿತವಾಗದೆ, ಅವರಿಂದ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು.

ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಕಲೆಯಲ್ಲಿ ಪ್ರೌಢಿಮೆ ಸಾಧಿಸಬೇಕು. ಪ್ರೇಕ್ಷಕರ ಚಪ್ಪಾಳೆಯೇ ಕಲೆಯ ಅಂತಿಮ ಗುರಿಯಾಗದೆ, ಅದರ ಶ್ರೇಷ್ಠತೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಾನಂದ ಹೆಗಡೆ ಕೆರೆಮನೆ ಮಾತನಾಡಿ, ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಬಂಗಾರಮಕ್ಕಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಜಿಲ್ಲೆಯ ಹೆಮ್ಮೆಯ ತಾಣವಾಗಿ ಬೆಳೆದಿದೆ ಎಂದರು.

ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಗೆ ಕ್ಷೇತ್ರ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಜಿಲ್ಲೆಯ ಮಠಮಾನ್ಯಗಳು ಯಕ್ಷಗಾನಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಐರೋಡಿ ಮಾತನಾಡಿ, ಯಕ್ಷಗಾನದ ಸಾಂಪ್ರದಾಯಿಕ ಸ್ವರೂಪವನ್ನು ಉಳಿಸುವ ಜವಾಬ್ದಾರಿ ಕಲಾ ಕೇಂದ್ರಗಳು ಮತ್ತು ಕಲಾವಿದರ ಮೇಲಿದೆ. ಮಕ್ಕಳಿಗೆ ಯಕ್ಷಗಾನ ಕಲಿಯಲು ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂದು ಆಶಿಸಿದರು.

ವಿಶ್ರಾಂತ ಪ್ರಾಂಶುಪಾಲ ವಿ.ಜಿ. ಹೆಗಡೆ ಗುಡ್ಗೆ ಅವರು ಗುರೂಜಿಯವರ ಕಲಾ ಪ್ರೋತ್ಸಾಹದ ಪ್ರಯತ್ನಗಳಿಗೆ ಎಲ್ಲರೂ ತಮ್ಮ ಕೈಲಾದ ಕೊಡುಗೆ ನೀಡಬೇಕು ಎಂದರು. ಯಕ್ಷಗಾನ ತರಬೇತುದಾರ ಉಮೇಶ್ ಭಟ್ ಬಾಡ ಮಾತನಾಡಿ, ಕಲೆಯ ಘನತೆ ಮತ್ತು ಸಾಂಪ್ರದಾಯಿಕ ಚೌಕಟ್ಟನ್ನು ಕಾಪಾಡಿಕೊಂಡು ಹೋಗುವ ಅಗತ್ಯವನ್ನು ತಿಳಿಸಿದರು.

ಪರಿಸರ ವಿಜ್ಞಾನಿ ಹಾಗೂ ವನ್ಯಜೀವಿ ತಜ್ಞ ಡಾ. ಎನ್.ಎಂ. ಗುರುಪ್ರಸಾದ್ ಮಾತನಾಡಿ, ಕರಾವಳಿ ಕರ್ನಾಟಕದ ಭಾಷಾ ಶುದ್ಧತೆ ಮತ್ತು ಸೌಂದರ್ಯವನ್ನು ಉಳಿಸುವಲ್ಲಿ ಯಕ್ಷಗಾನದ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.

ಶೈಲೇಶ್ ಕುಮಟಾ ಕಾರ್ಯಕ್ರಮ ನಿರೂಪಿಸಿದರು. ಉತ್ಸವದ ಅಂಗವಾಗಿ ‘ಹೇರಂಭ ವಿಜಯ (ಭೂ ಕೈಲಾಸ)’ ಯಕ್ಷಗಾನ ಪ್ರದರ್ಶನ ನಡೆಯಿತು.

NO COMMENTS

LEAVE A REPLY

Please enter your comment!
Please enter your name here

error: Content is protected !!