Friday, October 23, 2026
HomeLocal Newsಇದು ಎಲ್ಲರ ಹೋರಾಟ, ಯಾರೂ ನಿರ್ಲಕ್ಷಿಸಬೇಡಿ: ಎನ್.ಕೆ. ಭಟ್

ಇದು ಎಲ್ಲರ ಹೋರಾಟ, ಯಾರೂ ನಿರ್ಲಕ್ಷಿಸಬೇಡಿ: ಎನ್.ಕೆ. ಭಟ್

ಯಲ್ಲಾಪುರ: ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳು ಇಡೀ ಜಿಲ್ಲೆಯ ಪರಿಸರ ಮತ್ತು ಜನಜೀವನದ ಮೇಲೆ ಪರಿಣಾಮ ಬೀರಲಿವೆ. ಹೀಗಾಗಿ, ಈ ಹೋರಾಟ ಒಂದು ಪ್ರದೇಶಕ್ಕೆ ಸೀಮಿತವಾದುದಲ್ಲ ಎಂಬ ಅರಿವಿನಿಂದ ತಾಲೂಕಿನ ಎಲ್ಲ ಭಾಗದ ಜನರು ಕೈಜೋಡಿಸಬೇಕು ಎಂದು ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ ಅಗ್ಗಾಶಿಕುಂಬ್ರಿ ಕರೆ ನೀಡಿದರು.

ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಆಗ್ರಹಿಸಿ ನ. 3ರಂದು ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ನಡೆದ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಯೋಜನೆಗಳು ತಾಲೂಕಿನ ಬೇರೆ ಪ್ರದೇಶಗಳಲ್ಲಿ ನಡೆಯುತ್ತಿವೆ, ಅಲ್ಲಿನ ಜನರಿಗಷ್ಟೇ ಸಮಸ್ಯೆ ಎಂಬ ನಿರ್ಲಕ್ಷ್ಯ ಬೇಡ. ನಾಳೆ ಲಾಲಗುಳಿ ಹಳ್ಳದ ನೀರನ್ನು ಕಲಘಟಗಿಗೆ ಒಯ್ಯುವ ಯೋಜನೆ ಬರಬಹುದು. ಆಗ ತಾಲೂಕಿನ ಇತರ ಭಾಗದ ಜನರ ಸಹಕಾರವೂ ಬೇಕಾಗುತ್ತದೆ. ಪರಿಸರಕ್ಕೆ ಮಾರಕವಾಗಬಹುದಾದ ಇಂತಹ ಯೋಜನೆಗಳು ಎಲ್ಲರಿಗೂ ಸಂಬಂಧಿಸಿದ್ದು ಎಂಬ ಭಾವನೆಯಿಂದ ಪ್ರತಿಯೊಬ್ಬರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಎನ್.ಕೆ. ಭಟ್ ಅಗ್ಗಾಶಿಕುಂಬ್ರಿ ಹೇಳಿದರು.

ಸಮಿತಿಯ ಪ್ರಮುಖ ವೆಂಕಟ್ರಮಣ ಬೆಳ್ಳಿ ಮಾತನಾಡಿ, ಮುಂದಿನ ತಲೆಮಾರಿನ ಹಿತದೃಷ್ಟಿಯಿಂದ ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದು ಅಗತ್ಯವಾಗಿದೆ. ಹೀಗಾಗಿ ಪ್ರತಿಯೊಂದು ಮನೆಯಿಂದಲೂ ಜನರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಮಾತನಾಡಿ, ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನಿಂದ ಮಾತ್ರ ಹೋರಾಟದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆದ್ದರಿಂದ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಸಭೆಯಲ್ಲಿ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಕನಿಷ್ಠ 1,000 ಜನರು ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಶೇಷಗಿರಿ, ಮಾಚಣ್ಣ ಲಾಲಗುಳಿ, ವಿಶ್ವನಾಥ್ ಜಮಗುಳಿ, ಮಹದೇವ್ ಮರಾಠಿ, ಮಹೇಶ್ ಕಾಸರಕರ, ವಾಸುದೇವ್ ಮಾಪ್ಸೆಕರ್, ಮಂಜುನಾಥ್ ಪಾಟೀಲ್, ಮಹಾದೇವ ದೇಸಾಯಿ, ವಿಶ್ವೇಶ್ವರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕೈಟಕರ್ ವಂದಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share