ಯಲ್ಲಾಪುರ: ನದಿ ತಿರುವು ಯೋಜನೆಗೆ ವಿರೋಧವಿದೆ ಎಂದು ಸಾರ್ವಜನಿಕ ಸಭೆಗಳಲ್ಲಿ ಹೇಳುವ ಜನಪ್ರತಿನಿಧಿಗಳು, ಈ ಕುರಿತು ತಮ್ಮ ಆಂತರಿಕ ನಿಲುವು ಏನು ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಉಮ್ಮಚಗಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ ಸಂಕದಗುಂಡಿ ಹೇಳಿದರು.
ಶುಕ್ರವಾರ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ರಸ್ತೆ ತಡೆ ಸಂಚಾಲನಾ ಸಮಿತಿ ವತಿಯಿಂದ ಕುಂದರಗಿ, ಉಮ್ಮಚಗಿ, ಹಿತ್ಲಳ್ಳಿ ಮತ್ತು ಮಂಚಿಕೇರಿ ಭಾಗಗಳಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಜನಸಂಪರ್ಕ ಸಭೆಗಳ ಅಂಗವಾಗಿ ಉಮ್ಮಚಗಿ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ ಅಗ್ಗಾಶಿಕುಂಬ್ರಿ ಮಾತನಾಡಿ, ಈ ಹೋರಾಟ ಒಂದು ಯಜ್ಞವಿದ್ದಂತೆ. ಮಹಾಶಿವರಾತ್ರಿಯಂದು ಶಿವನಿಗೆ ಬಿಲ್ವಪತ್ರೆ ಸಮರ್ಪಿಸಿ ಪುಣ್ಯಕ್ಕೆ ಭಾಜನರಾಗುವಂತೆ, ನಾವೆಲ್ಲರೂ ಈ ಹೋರಾಟದ ಯಜ್ಞದಲ್ಲಿ ಪಾಲ್ಗೊಂಡು ನಮ್ಮ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಜನಸಂಪರ್ಕ ಸಭೆಗಳಲ್ಲಿ ಸಂಚಾಲಕ ಹರಿಪ್ರಕಾಶ ಕೋಣೆಮನೆ, ಕೊಳ್ಳ ಸಂರಕ್ಷಣಾ ಸಮಿತಿಯ ನರಸಿಂಹ ಸಾತೊಡ್ಡಿ, ರಾಘವೇಂದ್ರ ಭಟ್ ಹಾಸಣಗಿ, ವೆಂಕಟ್ರಮಣ ಭಟ್ ಕಿರಕುಂಭತ್ತಿ, ಎಂ.ಕೆ. ಭಟ್ ಯಡಳ್ಳಿ, ಎಂ.ಆರ್. ಹೆಗಡೆ ತಾರೆಹಳ್ಳಿ, ವಿ.ಟಿ. ಹೆಗಡೆ, ಎನ್.ಜಿ. ಹೆಗಡೆ ಭಟ್ರಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


