ಶಿರಸಿ: ಉದ್ಯಮ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಸಾಮಾನ್ಯ ವರ್ಗದ ಪುರುಷರು ಮತ್ತು ಮಹಿಳೆಯರಿಗಾಗಿ ಅ.27ರಿಂದ ನ.5ರವರೆಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಶಿರಸಿ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಸಿಡಾಕ್ ಕಾರವಾರ ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಪಂಚಾಯಿತಿ ಕಾರವಾರ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಯೋಜನೆಯಡಿ ಶಿರಸಿ ತಾಲೂಕು ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ತರಬೇತಿಯಲ್ಲಿ ಉದ್ಯಮಶೀಲತಾ ಪ್ರೇರಣೆ, ಉದ್ಯಮ ಆರಂಭಿಸಲು ಇರುವ ಅವಕಾಶಗಳು, ವ್ಯವಸ್ಥಾಪನಾ ಕೌಶಲ್ಯ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಲೆಕ್ಕಪತ್ರ ನಿರ್ವಹಣೆ, ಮಾರಾಟ ತಂತ್ರಗಳು, ಸರ್ಕಾರದ ಯೋಜನೆಗಳು ಮತ್ತು ಬ್ಯಾಂಕ್‌ಗಳ ಪಾತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಉದ್ಯಮಿಗಳ ಅನುಭವ ಹಂಚಿಕೆ ಹಾಗೂ ಸಣ್ಣ ಉದ್ಯಮಗಳ ನಿರ್ವಹಣೆ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಒಂದು ದಿನ ಕೈಗಾರಿಕೆಗಳಿಗೆ ಭೇಟಿ ನೀಡಿ, ಅಲ್ಲಿನ ಮಾಲೀಕರೊಂದಿಗೆ ಚರ್ಚೆ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ.
ಶಿರಸಿ ತಾಲೂಕಿನ 18ರಿಂದ 45 ವರ್ಷ ವಯಸ್ಸಿನ, ಕನಿಷ್ಠ ಎಸ್‌ಎಸ್‌ಎಲ್‌ಸಿ ಶಿಕ್ಷಣ ಹೊಂದಿರುವ ಸಾಮಾನ್ಯ ವರ್ಗದ ಆಸಕ್ತ ಪುರುಷರು ಮತ್ತು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆಸಕ್ತರು ಅ.26ರೊಳಗೆ ಸಿಡಾಕ್ ಕಾರವಾರದ ಉಪನಿರ್ದೇಶಕರಿಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಿಡಾಕ್ ಕಾರವಾರದ ಉಪನಿರ್ದೇಶಕ ಶಿವಾನಂದ ವೆಂ. ಎಲಿಗಾರ (ಮೊ. 9448812974) ಅಥವಾ ತರಬೇತುದಾರೆ ಪ್ರತಿಭಾ ಹೆಳವಿ (ಮೊ. 9353119412) ಅವರನ್ನು ಸಂಪರ್ಕಿಸಬಹುದು.


