ಅಂದಿನ ತೂಗುಕತ್ತಿ ಇಂದಿಗೂ ತಲೆಯ ಮೇಲಿದೆ | ಬೇಡ್ತಿ ಉಳಿಸಿಕೊಳ್ಳಲು ನಡೆದ ಹೋರಾಟದ ನೆನಪು
ಪ್ರವಾಸಿಗರ ಸ್ವರ್ಗವೆಂದೇ ಕರೆಸಿಕೊಳ್ಳುವ ಉತ್ತರ ಕನ್ನಡ ಜಿಲ್ಲೆಗೆ ನಮ್ಮ ಯಲ್ಲಾಪುರ ತಾಲೂಕು ಮುಕುಟವಿಟ್ಟಂತಿದೆ. ಇಲ್ಲಿನ ಸಮೃದ್ಧ ಕೃಷಿಭೂಮಿ, ಅಚ್ಚರಿ ಮೂಡಿಸುವ ಜನಜೀವನ, ವೈವಿಧ್ಯತೆಯನ್ನು ಒಳಗೊಂಡ ಹಳ್ಳಿಗಳು, ನಿಗೂಢತೆಯನ್ನು ಒಡಲಲ್ಲಿ ಅಡಗಿಸಿಕೊಂಡಿರುವ ದಟ್ಟವಾದ ಶ್ರೀಮಂತ ಕಾಡುಗಳು, ಜರಿ, ಹೊಳೆ, ನದಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಅಂದಿನ ಕಾಲದಿಂದಲೂ ‘ಜಲಪಾತಗಳ ತವರು’ ಎಂಬ ಹೆಸರಿಗೆ ಸಾಕ್ಷಿ ಒದಗಿಸುವ ಅಸಂಖ್ಯಾತ ಜಲಪಾತಗಳಂತೂ ಪ್ರವಾಸಿಗರಿಗೆ ಸದಾ ಆಕರ್ಷಣೆಯೇ. ಮಳೆಗಾಲದಲ್ಲಿ ಮೈದುಂಬಿ ಬೋರ್ಗರೆಯುವ ಇಲ್ಲಿನ ಮಾಗೋಡು ಜಲಪಾತವಂತೂ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ.
ಬೇಸಿಗೆಯಲ್ಲಿ ಬತ್ತಿ ಸೊರಗಿದಂತೆ ಕಂಡರೂ, ಮಳೆ ಪ್ರಾರಂಭವಾಗುತ್ತಿದ್ದಂತೆ ಮತ್ತೆ ಮೈದುಂಬಿಕೊಳ್ಳುತ್ತಾಳೆ ಬೇಡ್ತಿ. ಅಂದಹಾಗೆ, ಬೇಡ್ತಿ ನದಿ ಈ ಜಿಲ್ಲೆಯ ಅದ್ಭುತ ಸಂಪತ್ತು. ಎಲ್ಲೋ ಹುಟ್ಟಿ, ಕಾಡುಮೇಡುಗಳನ್ನು ದಾಟಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಪಾಲು ಹರಿದು ಅರಬ್ಬಿ ಸಮುದ್ರ ಸೇರುವ ಈ ನದಿಯ ಪಯಣವೇ ಒಂದು ಕೌತುಕ, ಬೆರಗು ಮೂಡಿಸುವ ಸಂಗತಿ.
ತನ್ನೊಂದಿಗೆ ಇನ್ನೂ ಅನೇಕ ಸಣ್ಣಪುಟ್ಟ ಹಳ್ಳ, ಕೊಳ್ಳ, ಹೊಳೆಗಳನ್ನು ಸೇರಿಸಿಕೊಳ್ಳುತ್ತಾ ಉಗಮಸ್ಥಾನದಿಂದ ಸುಮಾರು 152 ಕಿ.ಮೀ. ಸಾಗುವ ಬೇಡ್ತಿ, 86 ಕಿ.ಮೀ. ದೂರವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕ್ರಮಿಸುತ್ತಾಳೆ.
ನಮ್ಮ ಜಿಲ್ಲೆಯವರಿಗೆ ಬೇಡ್ತಿ ಹೊಳೆ ಎಂದರೆ ಅದೇನೋ ಒಂದು ಸೆಳೆತ. ಅಳೆಯಲಾಗದ ಭಾವನೆಗಳ ಬಂಧ. ಬೇರೆ ಜಿಲ್ಲೆಯಲ್ಲಿ ಹುಟ್ಟಿದರೂ ನಮ್ಮ ಜಿಲ್ಲೆಯ ತಾಲೂಕುಗಳನ್ನು ಹಸಿರಾಗಿಸಿದ, ಸಮೃದ್ಧ ಕಾಡು ಮತ್ತು ಜೀವವೈವಿಧ್ಯವನ್ನು ತನ್ನ ಒಡಲಲ್ಲಿ ಹೊಂದಿರುವ ಬೇಡ್ತಿಯೊಂದಿಗೆ ಇಲ್ಲಿನ ಜನರ ಬದುಕು ಬೆಸೆದುಕೊಂಡಿದೆ. ಆದರೆ, ಒಂದು ಕಾಲದಲ್ಲಿ ತನ್ನ ಒಡಲಲ್ಲಿ ಬದುಕು ಕಟ್ಟಿಕೊಂಡವರನ್ನೇ ಮುಳುಗಿಸಲು ಹೊರಟಿದ್ದ ಯೋಜನೆಯ ಕಥೆಯೂ ಈ ನದಿಗಿದೆ. ಬೇಡ್ತಿಯನ್ನು ಉಳಿಸಿಕೊಳ್ಳಲು ನಡೆದ ಹೋರಾಟದ ಇತಿಹಾಸವೂ ಇದೆ.
ಅಂತಹದ್ದೊಂದು ಯೋಜನೆ ಜಾರಿಯಾಗಿ ಕಾರ್ಯರೂಪಕ್ಕೆ ಬಂದಿತ್ತು ಎಂಬ ಸುಳಿವು ಈಗಿನ ಪೀಳಿಗೆಗೆ ಅರೆಬರೆಯ ನೆನಪಾಗಿದ್ದರೆ, ಮುಂದಿನ ಪೀಳಿಗೆಗೆ ಅದರ ಸುಳಿವೇ ಇಲ್ಲದಂತಾಗಬಹುದು.
ಶರಾವತಿ, ಕಾಳಿ ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟಿ, ಇಲ್ಲಿನ ಸ್ವಚ್ಛಂದ ಹಸಿರು ಸಿರಿಯನ್ನು ಜಲಸಮಾಧಿ ಮಾಡಲು ಹೊರಟ ಯೋಜನೆಗಳ ಕಹಿ ನೆನಪುಗಳು ಈಗಾಗಲೇ ಮಸುಕಾಗಿವೆ. ಅಂದು ಸ್ಥಳೀಯರು ಎಚ್ಚೆತ್ತುಕೊಳ್ಳದಿದ್ದರೆ, ಜನ್ಮಭೂಮಿಯ ಮೇಲಿನ ಪ್ರೀತಿ ಮತ್ತು ಕಾಳಜಿ ತೋರದಿದ್ದರೆ, ಇಂದು ನಮ್ಮ ಕಣ್ಣೆದುರು ಕಾಣುವ ಈ ಹಸಿರು ಸಿರಿಯೆಲ್ಲ ಕೇವಲ ನೆನಪಾಗಿ ಉಳಿದುಬಿಡುತ್ತಿತ್ತೇನೋ!
ಅಜ್ಜ, ಮುತ್ತಜ್ಜನ ಕಾಲದಿಂದಲೂ ಜನ್ಮಭೂಮಿಯನ್ನು ತಮ್ಮ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾ ಬಂದವರು ಇಲ್ಲಿನ ಜನರು. ಅಂದು ಸ್ಥಳೀಯರು ಸ್ವಲ್ಪವೇ ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ, ಅಣೆಕಟ್ಟಿನ ಹಿನ್ನೀರಿನಲ್ಲಿ ಹೇಳಹೆಸರಿಲ್ಲದೆ ಮುಳುಗಿ ಮರೆಯಾದ ಎಷ್ಟೋ ಊರುಗಳ ಸಾಲಿಗೆ ಮಾಗೋಡು ಹಾಗೂ ಸುತ್ತಮುತ್ತಲಿನ ಸಾವಿರಾರು ಎಕರೆ ಭೂಭಾಗವೂ ಸೇರಿಬಿಡುತ್ತಿತ್ತು.
ಅದು 1970-80ರ ದಶಕ. ಒಂದು ದಿನ ಇದ್ದಕ್ಕಿದ್ದಂತೆ ಮಾಗೋಡಿನ ರಸ್ತೆಯಲ್ಲಿ ಹತ್ತಾರು ಜೀಪುಗಳು ಧೂಳೆಬ್ಬಿಸುತ್ತಾ ಓಡಾಡತೊಡಗಿದವು. ಅಷ್ಟೇ ಅಲ್ಲ, ಅಂದಿನಿಂದ ತಿಂಗಳುಗಟ್ಟಲೆ ದಿನದಲ್ಲಿ ಹತ್ತಾರು ಬಾರಿ ಜೀಪುಗಳು ಸಂಚರಿಸಿದವು. ಸ್ಥಳೀಯರಿಗೆ ಅವರು ಯಾರು, ಎಲ್ಲಿಂದ ಬಂದವರು, ಏಕೆ ಬಂದಿದ್ದಾರೆ ಎಂಬುದರ ಕುರಿತು ಯಾವುದೇ ಸುಳಿವೂ ದೊರೆಯಲಿಲ್ಲ.
1970-80ರ ದಶಕದಲ್ಲಿ ಶಕ್ತಿಯ ಮೂಲವಾಗಿ ಹೆಚ್ಚು ಬಳಕೆಯಲ್ಲಿದ್ದದ್ದು ನವೀಕರಿಸಲಾಗದ ಇಂಧನ ಮೂಲಗಳಾದ ಕಲ್ಲಿದ್ದಲು, ಸೀಮೆಎಣ್ಣೆ ಇತ್ಯಾದಿಗಳು. ಹೆಚ್ಚುತ್ತಿದ್ದ ಇಂಧನ ಬೇಡಿಕೆಯಿಂದಾಗಿ ಗೃಹಬಳಕೆ ಮತ್ತು ಕೈಗಾರಿಕೆಗಳಿಗೆ ಶಕ್ತಿಯ ಪೂರೈಕೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ ಮೈಸೂರು ಪವರ್ ಕಾರ್ಪೊರೇಷನ್ ಹೊಸದೊಂದು ಯೋಜನೆಯನ್ನು ಸರ್ಕಾರದ ಮುಂದಿಟ್ಟಿತು.
ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಜಲವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಅವಕಾಶವಿರುವ ಹಲವು ಸಾಧ್ಯತೆಗಳನ್ನು ಪ್ರಸ್ತಾಪಿಸಿತು.
ಇದೇ ರೀತಿ 1972ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಬೇಡ್ತಿ ನದಿಗೆ ಅಡ್ಡಲಾಗಿ ಮಾಗೋಡಿನ ಬಳಿ 111 ಮೀಟರ್ ಎತ್ತರದ ಅಣೆಕಟ್ಟು ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಸರ್ಕಾರದಿಂದ ಅನುಮತಿ ದೊರೆಯಿತು. 1976ರಲ್ಲಿ ಯೋಜನೆ ಕಾರ್ಯರೂಪಕ್ಕೆ ಬಂದೇ ಬಿಟ್ಟಿತು. ಮಾಗೋಡಿನ ಕುಂಬತ್ತಿ ಎಂಬಲ್ಲಿ ಪೈಪ್‌ಲೈನ್ ಜೋಡಣೆಗೆ ಸುರಂಗ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಮಾಗೋಡು ಬಳಿ ಕಾರ್ಮಿಕರು, ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳಿಗೆ ಅಗತ್ಯವಿರುವ ವಸತಿಗಳನ್ನು ನಿರ್ಮಿಸಲಾಯಿತು.
ಬೇಡ್ತಿಯ ಇನ್ನೊಂದು ದಡದಲ್ಲಿರುವ ಮಂಚಿಕೇರಿಯಿಂದ ನಾಗರಜಡ್ಡಿಯವರೆಗೆ ಕಾಮಗಾರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಸಾಗಿಸಲು ಬೃಹತ್ ಟಾರ್ ರಸ್ತೆಯನ್ನೂ ನಿರ್ಮಿಸಲಾಯಿತು. ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ದೊರೆಯಿತು. ನೋಡನೋಡುತ್ತಿದ್ದಂತೆ ಶುದ್ಧಾತಿಶುದ್ಧ ಹಳ್ಳಿಯಾಗಿದ್ದ ಮಾಗೋಡು, ಕೆಲಸಗಾರರ ಕಾಲೋನಿಯಿಂದಾಗಿ ಜನನಿಬಿಡ ಪ್ರದೇಶವಾಗಿ ಪರಿವರ್ತನೆಯಾಯಿತು.
ತಿಂಗಳುಗಳು ಕಳೆದವು, ವರ್ಷಗಳೇ ಉರುಳಿದವು. ಈಗಿನಂತೆ ತಂತ್ರಜ್ಞಾನ, ಸಾರಿಗೆ ಸಂಪರ್ಕ ಮತ್ತು ಸಂವಹನ ಮಾಧ್ಯಮಗಳು ಯಾವುದೂ ಇಲ್ಲದ ಕಾಲವದು. ಅಲ್ಲಿ ನಡೆಯುತ್ತಿರುವುದೇನು ಎಂಬುದರ ಸಣ್ಣ ಅಂದಾಜೂ ಸ್ಥಳೀಯರಿಗೆ ಇರಲಿಲ್ಲ. ಜನರಂತೂ ಮುಗ್ಧರು. ತಾವಾಯಿತು, ತಮ್ಮ ಕೆಲಸವಾಯಿತು ಎಂದು ಬದುಕುತ್ತಿದ್ದವರು. ಅವರ ಪಾಡಿಗೆ ಅವರು ತಮ್ಮ ಬದುಕು ಸಾಗಿಸುತ್ತಿದ್ದರೆ, ಸ್ಥಳೀಯರಿಗೆ ಯಾವುದೇ ಸುಳಿವು ಬಿಟ್ಟುಕೊಡದೆ ಕಾಮಗಾರಿಗಳು ಮಾತ್ರ ಭರದಿಂದ ಸಾಗುತ್ತಿದ್ದವು.
ಮುಂದುವರೆಯುವುದು…
– ಸೌಪರ್ಣಿಕಾ, ಕೆನರಾ ನೆಕ್ಸ್ಟ್ ಡೆಸ್ಕ್.


