ಕಾರವಾರ: ಬರಪೀಡಿತ ತಾಲೂಕುಗಳಲ್ಲಿ ರೈತರು ಕೃಷಿ ಉದ್ದೇಶಕ್ಕಾಗಿ ಪಡೆದ ಸಾಲದ ಬಾಕಿ ವಸೂಲಿಗೆ ಬಲವಂತದ ಕ್ರಮಗಳನ್ನು ಕೈಗೊಂಡರೆ ಸಂಬಂಧಪಟ್ಟ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಲೀಡ್ ಬ್ಯಾಂಕ್ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯ ಮುಂಡಗೋಡು, ಯಲ್ಲಾಪುರ, ಅಂಕೋಲಾ, ಭಟ್ಕಳ, ಹಳಿಯಾಳ, ಶಿರಸಿ, ಜೋಯಿಡಾ ಹಾಗೂ ದಾಂಡೇಲಿ ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಈ ತಾಲೂಕುಗಳ ರೈತರು ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಹಾಗೂ ಕೃಷಿ ಆಧಾರಿತ ಉದ್ಯಮಗಳಿಗಾಗಿ ಪಡೆದಿರುವ ಸಾಲದ ಕಂತುಗಳನ್ನು ಬಲವಂತವಾಗಿ ವಸೂಲಿ ಮಾಡಬಾರದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಮಾರ್ಗಸೂಚಿಯಂತೆ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಿರುವ ಸೌಲಭ್ಯವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಸ್ವಯಂಚಾಲಿತವಾಗಿ ಅನ್ವಯಿಸುವಂತೆ ನಿರ್ದೇಶನ ನೀಡಿದರು.
ಬರದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಅನಧಿಕೃತ ಹಣಕಾಸು ಸಂಸ್ಥೆಗಳು ಹಾಗೂ ಲೇವಾದೇವಿದಾರರಿಂದ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ರೈತರಿಗೆ ಹೊಸ ಸಾಲಗಳನ್ನು ಆದ್ಯತೆಯ ಮೇರೆಗೆ ಮಂಜೂರು ಮಾಡಬೇಕು. ಬರದ ಸಂದರ್ಭದಲ್ಲಿ ರೈತರಿಗೆ ಲಭ್ಯವಿರುವ ಬ್ಯಾಂಕಿಂಗ್ ಸೌಲಭ್ಯಗಳು ಹಾಗೂ ನೆರವಿನ ಕ್ರಮಗಳ ಕುರಿತು ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಬ್ಯಾಂಕ್‌ಗಳು ತಮ್ಮ ವ್ಯಾಪ್ತಿಯ ರೈತರಿಗೆ ಒದಗಿಸಿರುವ ಆರ್ಥಿಕ ನೆರವು ಹಾಗೂ ಸೌಲಭ್ಯಗಳ ಸಂಪೂರ್ಣ ಮಾಹಿತಿ ಮತ್ತು ಸಂಬಂಧಿತ ದಾಖಲೆಗಳನ್ನು ಮುಂದಿನ ಸಭೆಯಲ್ಲಿ ಸಲ್ಲಿಸುವಂತೆ ಸೂಚಿಸಿದರು.
ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಹಾಗೂ ಕೈಗಾರಿಕಾ ಇಲಾಖೆಗಳ ಅಧಿಕಾರಿಗಳು ಬರ ಪರಿಹಾರದ ಭಾಗವಾಗಿ ಸರ್ಕಾರ ಕೈಗೊಂಡಿರುವ ಬ್ಯಾಂಕಿಂಗ್ ಸಂಬಂಧಿತ ನೆರವಿನ ಕ್ರಮಗಳ ಬಗ್ಗೆ ರೈತರಿಗೆ ವ್ಯಾಪಕ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕರೀಂ ಅಸದಿ, ನಬಾರ್ಡ್ ವ್ಯವಸ್ಥಾಪಕ ಸುಶೀಲ್ ಕುಮಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಜಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.


