ಶಿರಸಿ: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಕರ್ತವ್ಯನಿಷ್ಠೆ ಮೆರೆದ ಶಿರಸಿ ಹೆದ್ದಾರಿ ಗಸ್ತು (HRP) ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಅ. 16ರಂದು ರಾತ್ರಿ ಸುಮಾರು 2 ಗಂಟೆಗೆ ಶಿರಸಿ HRP ವಾಹನದ ರೂಟ್ ನಂ. 04ರ ಸಿಬ್ಬಂದಿ ಇಸುಳೂರು ಸಮೀಪದ ಅಪಘಾತವೊಂದರ ಕಾರ್ಯಾಚರಣೆ ಮುಗಿಸಿಕೊಂಡು ಹಿಂದಿರುಗುತ್ತಿದ್ದರು.
ಈ ವೇಳೆ ಇಸುಳೂರು ಸಮೀಪ ಕುಮಾರ್ ಕೃಷ್ಣಪ್ಪ ಲಮಾಣಿ (32) ಎಂಬುವವರು ತಮ್ಮ ದ್ವಿಚಕ್ರ ವಾಹನದಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡಿರುವುದು ಸಿಬ್ಬಂದಿಗಳ ಗಮನಕ್ಕೆ ಬಂದಿದೆ.
ತಕ್ಷಣ ಗಾಯಾಳುವಿನ ಬಳಿ ತೆರಳಿ ಪರಿಶೀಲಿಸಿದ ಸಿಬ್ಬಂದಿ, ತಡಮಾಡದೆ HRP ವಾಹನದಲ್ಲೇ ಅವರನ್ನು ಶಿರಸಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲು ನೆರವಾಗಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಸಮಯಪ್ರಜ್ಞೆ ಮತ್ತು ಮಾನವೀಯತೆಯಿಂದ ಸ್ಪಂದಿಸಿ ಗಾಯಾಳುವಿಗೆ ನೆರವಾದ ಶಿರಸಿ HRP ಸಿಬ್ಬಂದಿ ಜ್ಯೋತಿ ನಾಯಕ ಹಾಗೂ ವಾಹನ ಚಾಲಕ ನಾರಾಯಣ ನಾಯಕ ಅವರ ಕರ್ತವ್ಯನಿಷ್ಠೆಗೆ ಅಭಿನಂದನೆ ಸಲ್ಲಿಸಲಾಗಿದೆ.