ದಾಂಡೇಲಿ: ದಾಂಡೇಲಪ್ಪ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಾಂಡೇಲಿ ಶಹರ ಹಾಗೂ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.20ರ ಬೆಳಗ್ಗೆ 6 ಗಂಟೆಯಿಂದ ಅ.21ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಲಾಗಿದೆ. ಜೊತೆಗೆ, ಜಾತ್ರೆಯ ಹಿನ್ನೆಲೆಯಲ್ಲಿ ದಾಂಡೇಲಿ-ಹಳಿಯಾಳ ಮಾರ್ಗದ ವಾಹನ ಸಂಚಾರದಲ್ಲಿಯೂ ಬದಲಾವಣೆ ಮಾಡಲಾಗಿದೆ.
ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದಾಂಡೇಲಿ ಶಹರ ಮತ್ತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಮದ್ಯದಂಗಡಿ ಹಾಗೂ ವೈನ್ಶಾಪ್ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ, ಜಾತ್ರೆಯ ಹಿನ್ನೆಲೆಯಲ್ಲಿ ಅ.19ರ ಸಂಜೆ 4 ಗಂಟೆಯಿಂದ ಅ.21ರ ಬೆಳಗ್ಗೆ 6 ಗಂಟೆಯವರೆಗೆ ದಾಂಡೇಲಿ ಕೆ.ಸಿ. ವೃತ್ತದ ಮೂಲಕ ಕೆರವಾಡ ಮಾರ್ಗವಾಗಿ ಹಳಿಯಾಳಕ್ಕೆ ತೆರಳುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಈ ಮಾರ್ಗದ ಬದಲಿಗೆ ದಾಂಡೇಲಿಯಿಂದ ಹಳಿಯಾಳಕ್ಕೆ ತೆರಳುವ ವಾಹನಗಳು ಸೋಮಾನಿ ವೃತ್ತ, ಬರ್ಚಿ ರಸ್ತೆ, ಬರ್ಚಿನಾಕಾ ಹಾಗೂ ಕರ್ಕಾನಾಕ ಮೂಲಕ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


