ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾಮದ ಹುಲೆಕೋಣೆಯಲ್ಲಿ ಶ್ರೀ ಗ್ರಾಮದೇವಿ ಯುವಕ ಸಂಘ ಹಾಗೂ ಚಂದಗುಳಿ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ಆಯೋಜಿಸಿರುವ 4ನೇ ವರ್ಷದ ಶಾರದಾ ಮಹೋತ್ಸವ ಅ.16ರಂದು ಆರಂಭಗೊಂಡಿದ್ದು, ಅ.20ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಹೋತ್ಸವದ ಅಂಗವಾಗಿ ಅ.16ರಂದು ಮೂರ್ತಿ ಸ್ಥಾಪನೆ ಹಾಗೂ ಮಹಾಪೂಜೆ ನೆರವೇರಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಊರಿನ ಹಿರಿಯರನ್ನು ಗೌರವಿಸಲಾಯಿತು. ಎಲ್.ಪಿ. ಭಟ್ಟ ಗುಂಡ್ಕಲ್ ಅಧ್ಯಕ್ಷತೆ ವಹಿಸಿದ್ದರು. ಶಿವರಾಮ ಸುಬ್ರಾಯ ಭಟ್ಟ ಉದ್ಘಾಟಿಸಿದರು. ನಾಗರಾಜ ಭಟ್ಟ ಕವಡಿಕೆರೆ, ಸುಬ್ಬಣ್ಣ ಉದ್ದಾಬೈಲು, ನರಸಿಂಹ ಆರ್. ಭಾಗ್ವತ್, ನಾರಾಯಣ ಜಾನು ನಾಯ್ಕ ಹಾಗೂ ರಾಮಕೃಷ್ಣ ಬಾಂದೇಕರ ಸೇರಿದಂತೆ ಊರಿನ ಹಿರಿಯರು ಉಪಸ್ಥಿತರಿದ್ದರು. ರಾತ್ರಿ ವಿಶ್ವವಂದ್ಯಂ ಮಹಿಳಾ ಕಲಾಬಳಗ ಜೂಜಿನಬೈಲ್ ವತಿಯಿಂದ ‘ಜಾಂಬವತಿ ಪರಿಣಯ’ ತಾಳಮದ್ದಳೆ ನಡೆಯಿತು.
ಅ.17ರಂದು ಸಂಜೆ 6.30ಕ್ಕೆ ಮಕ್ಕಳ ಕಾರ್ಯಕ್ರಮ ನಡೆಯಿತು. ರಾತ್ರಿ 9ಕ್ಕೆ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.18ರಂದು ಬೆಳಗ್ಗೆ ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಹಲಸ್ಕಂಡ ಮಾತೃಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.19ರಂದು ಸಂಜೆ 6ಕ್ಕೆ ಗಣೇಶ ಗುಂಡ್ಕಲ್ ಅವರಿಂದ ಭಕ್ತಿಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ 8ಕ್ಕೆ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಸುಧನ್ವ ಕಾಳಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ, ನರಸಿಂಹ ಭಟ್ಟ ಹಂಡ್ರಮನೆ ಹಾಗೂ ಪ್ರಶಾಂತ ಹೆಗಡೆ ಕೈಗಡಿ ಭಾಗವಹಿಸಲಿದ್ದು, ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ, ಕಾರ್ತಿಕ ಚಿಟ್ಟಾಣಿ, ನಾಗರಾಜ ಭಟ್ಟ ಕುಂಕಿಪಾಲ, ಶ್ರೀಧರ ಅಣಲಗಾರ, ದೀಪಕ ಭಟ್ಟ ಕುಂಕಿ, ಶ್ರೀವತ್ಸ ಭಟ್ಟ ಬಟ್ಲಗುಂಡಿ ಹಾಗೂ ಅಚ್ಯುತ ಕವಡಿಕೇರಿ ಕಲಾವಿದರಾಗಿ ಕಾಣಿಸಿಕೊಳ್ಳಲಿದ್ದಾರೆ. ಕವಾಳೆ ಸಹೋದರರು ವೇಷಭೂಷಣದ ಜವಾಬ್ದಾರಿ ನಿರ್ವಹಿಸಲಿದ್ದು, ಗೋಪಾಲ ಪಟಗಾರ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಲಿದ್ದಾರೆ.
ಅ.20ರಂದು ಸಂಜೆ 7ಕ್ಕೆ ಮಹಾಪೂಜೆ ಹಾಗೂ ಮಂಗಳಾರತಿ ನೆರವೇರಲಿದ್ದು, ಬಳಿಕ ಫಲಾವಳಿಗಳ ಸವಾಲು ನಡೆಯಲಿದೆ. ನಂತರ ಶಾರದಾ ಮೂರ್ತಿಯ ವಿಸರ್ಜನೆಯೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಸಮಿತಿ ತಿಳಿಸಿದೆ.


