Thursday, October 22, 2026
HomeInformationಬೇಡ್ತಿ ಹೋರಾಟದ ನೆನಪಿನಲ್ಲಿ ಮರೆಯಲಾಗದ ಓಂಕಾರಜ್ಜ!

ಬೇಡ್ತಿ ಹೋರಾಟದ ನೆನಪಿನಲ್ಲಿ ಮರೆಯಲಾಗದ ಓಂಕಾರಜ್ಜ!

ಬೇಡ್ತಿ ಯೋಜನೆ ಕಾರ್ಯರೂಪಕ್ಕೆ ಬಂದು ಕಾಮಗಾರಿಗಳು ಭರದಿಂದ ಸಾಗುತ್ತಿದ್ದವು. ಆದರೆ ಸ್ಥಳೀಯರಿಗೆ ಮಾತ್ರ ಯೋಜನೆಯ ಬಗ್ಗೆ ಸ್ಪಷ್ಟ ಚಿತ್ರಣವೇ ಇರಲಿಲ್ಲ. ಸರ್ಕಾರದ ಯೋಜನೆ ಎಂದು ಏನೇನೋ ಮಾಡುತ್ತಿದ್ದಾರೆ, ಇದರಿಂದ ನಮ್ಮ ಬದುಕಿನ ಮೇಲಾಗುವ ಪರಿಣಾಮವೇನು ಎಂಬುದು ಯಾರಿಗೂ ತಿಳಿದಿರಲಿಲ್ಲ.

ಅಧಿಕಾರಿಗಳನ್ನು ಹಾಗೂ ಕಾರ್ಮಿಕರನ್ನು ವಿಚಾರಿಸಿದರೆ ಅಲ್ಪಸ್ವಲ್ಪ ಮಾಹಿತಿ ಸಿಗುತ್ತಿತ್ತಷ್ಟೇ. ಇಡೀ ಊರೇ ಮುಳುಗಡೆಯಾಗುತ್ತದೆ, ಇಲ್ಲಿರುವವರೆಲ್ಲರನ್ನೂ ಒಕ್ಕಲೆಬ್ಬಿಸಿ ಬೇರೆಡೆಗೆ ಸ್ಥಳಾಂತರಿಸುತ್ತಾರೆ ಎಂಬ ಅಸ್ಪಷ್ಟ ಸುದ್ದಿಗಳು ಹರಡತೊಡಗಿದ್ದಂತೆ ಜನರಲ್ಲಿ ಆತಂಕ ಮನೆಮಾಡಿತ್ತು. ಕೃಷಿಯನ್ನೇ ನಂಬಿ ಬದುಕುತ್ತಿದ್ದ ಸಣ್ಣ ಹಿಡುವಳಿದಾರರಿಗಂತೂ ಆಕಾಶವೇ ಕಳಚಿಬಿದ್ದಂತಾಗಿತ್ತು.

ಇದರ ನಡುವೆ ಯೋಜನೆಗೆ ಸರ್ಕಾರ ಅಪಾರ ಹಣ ಹೂಡುತ್ತಿದೆ, ನಿಮ್ಮ ಜಮೀನಿಗೆ ದುಪ್ಪಟ್ಟು ಪರಿಹಾರ ನೀಡುತ್ತಾರೆ, ಅದನ್ನು ಪಡೆದುಕೊಂಡು ಬೇರೆಲ್ಲಾದರೂ ಹೋಗಿ ಆರಾಮವಾಗಿ ಬದುಕಬಹುದು ಎಂಬ ಮಾತುಗಳೂ ಕೇಳಿಬರುತ್ತಿದ್ದವು. ಇಂತಹ ಮಾತುಗಳು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದವು. ತಲೆತಲಾಂತರಗಳಿಂದ ಬದುಕು ಕಟ್ಟಿಕೊಂಡ ನೆಲವನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾದರೆ ಮುಂದೇನು ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತ್ತು.

ಈ ಸಂದರ್ಭದಲ್ಲಿ ಬೇಡ್ತಿ ನದಿ ಭಾಗದ ಪ್ರತಿಯೊಬ್ಬರೂ ನೆನೆಯಲೇಬೇಕಾದವರು ಮಾಗೋಡಿನ ಓಂಕಾರ ಭಟ್ ಕಿರಕುಂಬತ್ತಿ. ಒಂದೂವರೆ ವರ್ಷದ ಹಿಂದೆ ನಮ್ಮನ್ನೆಲ್ಲ ಅಗಲಿದ ದಿವ್ಯಾತ್ಮ ಓಂಕಾರ ಭಟ್ಟರಿಗೆ ಆ ದಿನಗಳಲ್ಲಿ ಸುಮಾರು 33–34 ವರ್ಷ ವಯಸ್ಸು. ಗ್ರಾಮದ ಇತರರಂತೆಯೇ ಅವರಿಗೂ ಬದುಕಿನ ಆಧಾರವಾಗಿದ್ದದ್ದು ಒಂದಿಷ್ಟು ಜಮೀನು. ಅದರ ಜೊತೆಗೆ ಪೌರೋಹಿತ್ಯವನ್ನೂ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಇಂತಹ ಪರಿಸ್ಥಿತಿಯನ್ನು ಅವರು ತಮ್ಮ ಬದುಕಿನಲ್ಲಿ ಎಂದೂ ಎದುರಿಸಿರಲಿಲ್ಲ.

ಏಕಾಏಕಿ ಹುಟ್ಟೂರನ್ನೇ ಬಿಟ್ಟು ಹೊರಡಿ ಎಂದರೆ ಹೋಗುವುದಾದರೂ ಎಲ್ಲಿಗೆ? ಹೊಳೆಯಾಚೆಗಿನ ಮಂಚಿಕೇರಿ ಭಾಗದ ಜನರೊಂದಿಗೆ ಹೆಚ್ಚಿನ ಸಂಪರ್ಕವೂ ಇರಲಿಲ್ಲ. ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಪರಿಚಯವೂ ಇರಲಿಲ್ಲ. ಆದರೆ ತಮ್ಮ ಜಮೀನು ಮತ್ತು ಬದುಕನ್ನು ಉಳಿಸಿಕೊಳ್ಳಬೇಕೆಂದರೆ ಹೋರಾಟ ಅನಿವಾರ್ಯ ಎಂಬುದು ಅವರಿಗೆ ನಿಧಾನವಾಗಿ ಮನವರಿಕೆಯಾಗತೊಡಗಿತು. ಮುಂದಿನ ದಾರಿ ಯಾವುದು ಎಂಬ ಸ್ಪಷ್ಟತೆ ಇಲ್ಲದಿದ್ದರೂ ಸುಮ್ಮನೆ ಕುಳಿತುಕೊಳ್ಳುವಂತಿರಲಿಲ್ಲ.

ಅಲ್ಲಿಯವರೆಗೆ ಬೇಡ್ತಿ ಜಲವಿದ್ಯುತ್‌ ಯೋಜನೆಯಿಂದ ನಿಖರವಾಗಿ ಎಷ್ಟು ಮನೆಗಳು, ಎಷ್ಟು ಎಕರೆ ಜಮೀನು ಮುಳುಗಡೆಯಾಗಲಿದೆ ಎಂಬ ಅಧಿಕೃತ ಮಾಹಿತಿ ಸ್ಥಳೀಯರ ಕೈಯಲ್ಲಿರಲಿಲ್ಲ. ಸರ್ಕಾರದಿಂದ ಅಧಿಕೃತ ನೋಟಿಸ್‌ಗಳೂ ಬಂದಿರಲಿಲ್ಲ. ಇಂತಹ ಅನಿಶ್ಚಿತತೆಯ ನಡುವೆಯೇ ಮಾಗೋಡು ಭಾಗದಲ್ಲಿ ಹೋರಾಟದ ಕಿಡಿ ಹೊತ್ತಿಸಿದವರು ಓಂಕಾರ ಭಟ್ ಕಿರುಕುಂಬತ್ತಿ.

ಚಳವಳಿಯ ಅನುಭವವಾಗಲಿ, ಹೋರಾಟದ ಸಂಘಟನೆಯ ಪರಿಚಯವಾಗಲಿ ಇಲ್ಲದಿದ್ದರೂ ಜನರ ಬದುಕಿನ ಪ್ರಶ್ನೆ ಅವರನ್ನು ಹೋರಾಟದ ಮುಂಚೂಣಿಗೆ ತಂದು ನಿಲ್ಲಿಸಿತು. ಓಂಕಾರ ಭಟ್‌ ಕಿರಕುಂಭತ್ತಿ ಅವರೊಂದಿಗೆ ಹಲವರು ಕೈಜೋಡಿಸಿದಂತೆ ಸಂಘಟನೆ ನಿಧಾನವಾಗಿ ಚುರುಕು ಪಡೆದುಕೊಳ್ಳತೊಡಗಿತು.

ಈ ಹೋರಾಟಕ್ಕೆ ಕಾನೂನಾತ್ಮಕ ಮಾಹಿತಿ, ಸಹಕಾರ ಮತ್ತು ಮಾರ್ಗದರ್ಶನ ನೀಡಿದವರಲ್ಲಿ ಯಲ್ಲಾಪುರ ಭಾಗದಲ್ಲಿ ‘ಕಣ್ಣಿ ವಕೀಲರು’ ಎಂದೇ ಪರಿಚಿತರಾಗಿರುವ ವಿ.ಪಿ ಭಟ್ ಕಣ್ಣಿ ಅವರ ಪಾತ್ರವೂ ಮಹತ್ವದ್ದಾಗಿತ್ತು.

ಮುಂದುವರೆಯುವುದು…

– ಸೌಪರ್ಣಿಕಾ | ಕೆನರಾ ನೆಕ್ಸ್ಟ್‌ ಡೆಸ್ಕ್.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share