ಬಲೆಯ ಸಮೇತ ಹೆಬ್ಬಾವನ್ನು ಮರಕ್ಕೆ ಕಟ್ಟಿಹಾಕಿದ ಅಮಾನವೀಯ ಕೃತ್ಯ!
ಮುಂಡಗೋಡ: ಹೊಲದ ಬೇಲಿಗೆ ಅಳವಡಿಸಿದ್ದ ನೈಲಾನ್ ಬಲೆಗೆ ಆಕಸ್ಮಿಕವಾಗಿ ಸಿಲುಕಿದ್ದ ಬೃಹತ್ ಹೆಬ್ಬಾವನ್ನು ಬಿಡಿಸುವ ಬದಲು, ಬಲೆಯ ಸಮೇತ ತಂದು ರಸ್ತೆ ಬದಿಯ ಮರಕ್ಕೆ ಕಟ್ಟಿಹಾಕಿದ ಘಟನೆ ಮುಂಡಗೋಡ ಪಟ್ಟಣದ ಶಿರಸಿ–ಹುಬ್ಬಳ್ಳಿ ರಸ್ತೆ ಪಕ್ಕದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ವಿಷಯ ತಿಳಿದ ಅರಣ್ಯ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಬಿಡಿಸಿದ್ದಾರೆ.
ಯಾವುದೋ ರೈತರ ಜಮೀನಿನ ರಕ್ಷಣೆಗೆ ಅಳವಡಿಸಿದ್ದ ನೈಲಾನ್ ಬಲೆಗೆ ಹೆಬ್ಬಾವು ಸಿಲುಕಿಕೊಂಡಿತ್ತು. ಅದನ್ನು ಬಿಡಿಸುವ ಪ್ರಯತ್ನ ಮಾಡದೆ, ಬಲೆಯನ್ನೇ ಕತ್ತರಿಸಿ ಹೆಬ್ಬಾವಿನ ಸಮೇತ ತಂದು ರಸ್ತೆ ಪಕ್ಕದ ಅರಣ್ಯದ ಮರಕ್ಕೆ ಬಿಗಿದು ಹೋಗಲಾಗಿತ್ತು. ಬಲೆಯ ಬಿಗಿತದಿಂದಾಗಿ ಹೆಬ್ಬಾವು ಉಸಿರಾಡಲೂ ಸಾಧ್ಯವಾಗದೆ ಸಾವು-ಬದುಕಿನ ನಡುವೆ ಹೋರಾಡುತ್ತಿತ್ತು.
ಇದನ್ನು ಗಮನಿಸಿದ ಸ್ಥಳೀಯರಾದ ಪ್ರಭು ಜ್ಯೋತಿಭಾನೂರ್ ಹಾಗೂ ಶಿವಾನಂದ ಮೀಟೆಗಾರ್ ತಕ್ಷಣ ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಅವರಿಗೆ ಮಾಹಿತಿ ನೀಡಿದರು. ಕರೆ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಮುತ್ತುರಾಜ ಹಳ್ಳಿ ಅವರು, ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಬಲೆಯನ್ನು ಕತ್ತರಿಸಿ ಹೆಬ್ಬಾವನ್ನು ಬಿಡಿಸಿದರು. ಈ ವೇಳೆ ಹೆಬ್ಬಾವಿಗೆ ಯಾವುದೇ ಗಾಯವಾಗದಂತೆ ಎಚ್ಚರ ವಹಿಸಿ ಅದರ ಜೀವ ಉಳಿಸಿದರು.
ಸಂಕಷ್ಟದಲ್ಲಿದ್ದ ವನ್ಯಜೀವಿಯ ರಕ್ಷಣೆಗೆ ತಕ್ಷಣ ಸ್ಪಂದಿಸಿದ ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಗಳು ಮಾನವನ ಅಜಾಗರೂಕತೆಯಿಂದ ಸಂಕಷ್ಟಕ್ಕೆ ಸಿಲುಕಿದಾಗ ಅವುಗಳ ರಕ್ಷಣೆಗೆ ಮುಂದಾಗುವುದು ಅಗತ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.