ಯಲ್ಲಾಪುರ: ಸನಾತನ ಧರ್ಮದ ಮಹತ್ವ, ಗೋಮಾತೆಯ ರಕ್ಷಣೆ ಹಾಗೂ ಗೋಮಾತೆಗೆ ರಾಷ್ಟ್ರೀಯ ಮಾತೆಯ ಸ್ಥಾನಮಾನ ನೀಡುವ ಸಂದೇಶ ಸಾರುವ ಉದ್ದೇಶದಿಂದ ದಂಡ ನಮಸ್ಕಾರದ ಮೂಲಕ ದೇಶ ಪರ್ಯಟನೆ ಕೈಗೊಂಡಿರುವ ಉತ್ತರ ಪ್ರದೇಶದ ಬರೇಲಿಯ ನರೇಶ ಗಂಗಾವರ್ ಮಹಾರಾಜ್, ಸುಮಾರು 10,800 ಕಿ.ಮೀ. ಕ್ರಮಿಸಿ ಶುಕ್ರವಾರ ಯಲ್ಲಾಪುರದ ಮೂಲಕ ಮುಂದುವರಿದರು.
2023ರಲ್ಲಿ ಆರಂಭಿಸಿರುವ ಈ ಯಾತ್ರೆಯ ಮೂಲಕ ದೇಶಾದ್ಯಂತ ಒಟ್ಟು 30 ಸಾವಿರ ಕಿ.ಮೀ. ಸಂಚರಿಸುವ ಸಂಕಲ್ಪವನ್ನು ಅವರು ಹೊಂದಿದ್ದಾರೆ. ಈಗಾಗಲೇ 12 ರಾಜ್ಯಗಳಲ್ಲಿ ಸಂಚರಿಸಿರುವ ಅವರು, ದಂಡ ನಮಸ್ಕಾರದ ಮೂಲಕ ತಮ್ಮ ಯಾತ್ರೆಯನ್ನು ಮುಂದುವರಿಸಿದ್ದಾರೆ.
ಈ ಕಠಿಣ ಯಾತ್ರೆಯಲ್ಲಿ ನರೇಶ ಗಂಗಾವರ್ ಮಹಾರಾಜ್ ಅವರಿಗೆ ಅವರ ಪತ್ನಿಯೂ ಸಾಥ್ ನೀಡುತ್ತಿದ್ದಾರೆ. ಯಲ್ಲಾಪುರ ಮಾರ್ಗವಾಗಿ ಗೋಕರ್ಣ, ಕೊಲ್ಲೂರು ಹಾಗೂ ರಾಮೇಶ್ವರದತ್ತ ಸಾಗಲಿರುವ ಅವರು, ಮಾರ್ಗಮಧ್ಯೆ ಸಿಗುವ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತ ದೇಶಪರ್ಯಟನೆ ಮುಂದುವರಿಸುವುದಾಗಿ ʻಕೆನರಾ ನೆಕ್ಸ್ಟ್ʼಗೆ ತಿಳಿಸಿದರು.
ಉತ್ತರ ಪ್ರದೇಶದ ಬರೇಲಿ ಮೂಲದ ನರೇಶ್ ಗಂಗಾವರ್ ಅವರು ಪತ್ನಿ ಸುಮಿತ್ರಾ ದೇವಿ ಹಾಗೂ ಪುತ್ರ ಪ್ರಹ್ಲಾದ್ ಪಟೇಲ್ ಜೊತೆಗೂಡಿ 2023ರ ಮೇ 1ರಂದು ದಂಡ ನಮಸ್ಕಾರ ಯಾತ್ರೆ ಆರಂಭಿಸಿದ್ದಾರೆ. ಸನಾತನ ಧರ್ಮದ ರಕ್ಷಣೆ ಹಾಗೂ ಗೋಮಾತೆಗೆ ರಾಷ್ಟ್ರಮಾತೆಯ ಸ್ಥಾನಮಾನ ನೀಡಬೇಕೆಂಬ ಸಂಕಲ್ಪದೊಂದಿಗೆ ಆರಂಭಿಸಿರುವ ಈ ಯಾತ್ರೆಯನ್ನು 12 ವರ್ಷಗಳ ಕಾಲ ಮುಂದುವರಿಸುವ ಗುರಿ ಹೊಂದಿದ್ದಾರೆ.
ದೇಶದ ಪ್ರಮುಖ ದೇವಾಲಯಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ದಂಡ ನಮಸ್ಕಾರ ಮಾಡುತ್ತ ಸಾಗುತ್ತಿರುವ ಈ ಕುಟುಂಬವು ನಾಲ್ಕು ಧಾಮಗಳು, 12 ಜ್ಯೋತಿರ್ಲಿಂಗಗಳು, 18 ಶಕ್ತಿಪೀಠಗಳು ಸೇರಿದಂತೆ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಸಂಕಲ್ಪ ಹೊಂದಿದೆ. ಯಾತ್ರೆಯ ಸಂದರ್ಭದಲ್ಲಿ ದಂಡ ನಮಸ್ಕಾರ ಮಾಡುವುದು ಈ ಯಾತ್ರೆಯ ವಿಶೇಷವಾಗಿದೆ.
ನರೇಶ್ ಗಂಗಾವರ್ ಕುಟುಂಬ, ಸನಾತನ ಧರ್ಮದ ಸಂದೇಶವನ್ನು ಸಾರುವುದರ ಜೊತೆಗೆ ಗೋಮಾತೆಗೆ ರಾಷ್ಟ್ರಮಾತೆಯ ಸ್ಥಾನಮಾನ ದೊರೆಯಬೇಕೆಂಬ ಆಶಯವನ್ನು ಜನರಿಗೆ ತಲುಪಿಸುತ್ತಿದೆ. ಯಾತ್ರೆಯ ಮಾರ್ಗದಲ್ಲಿ ವಿವಿಧ ದೇವಾಲಯಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಾ ತಮ್ಮ ಸಂಕಲ್ಪವನ್ನು ಮುಂದುವರಿಸುತ್ತಿದೆ.


